
ಮಕರ ಸಂಕ್ರಾಂತಿಯ ಸಂದರ್ಭದಲ್ಲಿ ಚಿಕ್ಕಬಳ್ಳಾಪುರದ ಸದ್ಗುರು ಸನ್ನಿಧಿಯಲ್ಲಿ ಮಹಾಶೂಲ ಮತ್ತು ನಂದಿಯನ್ನು ಪ್ರತಿಷ್ಠಾಪಿಸಲಾಯಿತು. 21 ಅಡಿ ಎತ್ತರದ ನಂದಿ ಮತ್ತು 54 ಅಡಿ ಎತ್ತರದ ಮಹಾತ್ರಿಶೂಲದ ಪ್ರತಿಷ್ಠಾಪನೆಯನ್ನು ಸಾವಿರಾರು ಭಕ್ತರು ಕಣ್ತುಂಬಿಕೊಂಡರು. ಆದಿಯೋಗಿ ಪ್ರತಿಮೆಯೂ ಲೇಸರ್ಶೋನಲ್ಲಿ ಕಂಗೊಳಿಸಿತು.

ನಂದಿ, ತ್ರಿಶೂಲ ಪ್ರತಿಷ್ಠಾಪಿಸಿದ ಸ್ಥಳಗಳನ್ನು ಸಾರ್ವಜನಿಕ ದರ್ಶನಕ್ಕೆ ತೆರೆಯುವ ಮುನ್ನ, ಪ್ರತಿಷ್ಠಾಪನೆಯಲ್ಲಿ ಭಾಗಿಯಾದವರು ನಂದಿಗೆ ಎಣ್ಣೆಯನ್ನು ಅರ್ಪಿಸಿದರು. ದಿನವಿಡೀ ನಡೆದ ಉತ್ಸವದಲ್ಲಿ ಸ್ಥಳೀಯ ಸಮುದಾಯಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಸಾಂಸ್ಕೃತಿಕ ಪ್ರದರ್ಶನಗಳು ಮತ್ತು ವರ್ಣರಂಜಿತ ಸಂಕ್ರಾಂತಿ ಜಾತ್ರೆಯನ್ನು ಒಳಗೊಂಡ ಸಾಂಪ್ರದಾಯಿಕ ಉತ್ಸವಗಳಲ್ಲಿ ತಮ್ಮನ್ನು ತೊಡಗಿಸಿಕೊಂಡವು.

ಆದಿಯೋಗಿಯ ಸನ್ನಿಧಿಯಲ್ಲಿ ಪ್ರಥಮ ಬಾರಿಗೆ ಮಾಧೇಶ್ವರನ ಭಕ್ತರಿಂದ ಪ್ರದರ್ಶಿಸಲ್ಪಟ್ಟ ಕರ್ನಾಟಕದ ಸಾಂಪ್ರದಾಯಿಕ ಕಲಾ ಪ್ರಕಾರವಾದ ಕಂಸಾಳೆ ನೃತ್ಯದಿಂದಾಗಿ ಮನಮೋಹಕ ಸಾಂಸ್ಕೃತಿಕ ಸಂಜೆಯ ವೈಭವಕ್ಕೆ ಮತ್ತಷ್ಟು ಕಳೆಯೇರಿತು. (ಫೋಟೋ: ಪ್ರತಿಷ್ಠಾಪನೆ ಮಾಡಿದ ಮಹಾ ತ್ರಿಶೂಲ)

ಪೌರಾಣಿಕ ಕಾಲದ ಹಿನ್ನೆಲೆ ಹೊಂದಿರುವ ಕಂಸಾಳೆಯು, ಹಿತ್ತಾಳೆಯಿಂದ ನಿರ್ಮಿತವಾದ ಜೋಡಿಯಾಗಿ ನುಡಿಸುವ ಸಂಗೀತ ವಾದ್ಯವಾಗಿದ್ದು, ಲಯಬದ್ಧ ರಾಗವನ್ನು ಉಂಟುಮಾಡಿ ಪ್ರೇಕ್ಷಕರನ್ನು ಸಮ್ಮೋಹನಕ್ಕೊಳಗಾಗಿಸುತ್ತದೆ.

ಪ್ರತಿಯೊಂದು ಶಿವ ದೇವಾಲಯದ ಹೊರಗೆ ಸಾಂಕೇತಿಕವಾಗಿ ನಂದಿಯನ್ನು ಕಾಣಬಹುದು. ನಂದಿಯು ಅವಿರತ ಕಾಯುವಿಕೆಯ ಸಂಕೇತವಾಗಿದೆ. ಏಕೆಂದರೆ ಕಾಯುವುದು ಭಾರತೀಯ ಸಂಸ್ಕೃತಿಯಲ್ಲಿ ಶ್ರೇಷ್ಠವಾದುದೆಂದು ಪರಿಗಣಿಸಲಾಗಿದೆ.

ಸುಮ್ಮನೆ ಕುಳಿತು ಕಾಯುವುದು ಹೇಗೆ ಎಂದು ತಿಳಿದಿರುವವರು ಸಹಜವಾಗಿ ಧ್ಯಾನಸ್ಥನಾಗಿರುತ್ತಾರೆ. ಜನರು ಯಾವಾಗಲೂ ಧ್ಯಾನವನ್ನು ಒಂದು ರೀತಿಯ ಚಟುವಟಿಕೆ ಎಂದು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ಇಲ್ಲ, ಇದು ಒಂದು ಗುಣಧರ್ಮ. ಪ್ರಾರ್ಥನೆ ಎಂದರೆ ನೀವು ದೇವರೊಂದಿಗೆ ಮಾತನಾಡಲು ಪ್ರಯತ್ನಿಸುತ್ತಿದ್ದೀರಿ ಎಂದರ್ಥ ಎಂದು ಸದ್ಗುರು ಜಗ್ಗಿ ವಾಸುದೇವ್ ಹೇಳಿದರು.

ನಿಮ್ಮ ಪ್ರತಿಜ್ಞೆಗಳು, ನಿರೀಕ್ಷೆಗಳು ಅಥವಾ ಇನ್ನೇನಾದರೂ ಅವನಲ್ಲಿ ನಿವೇದಿಸಲು ಯತ್ನಿಸುತ್ತಿದ್ದೀರಿ. ಧ್ಯಾನ ಎಂದರೆ ನೀವು ಅಸ್ತಿತ್ವವನ್ನು, ಸೃಷ್ಟಿಯ ಅಂತಿಮ ಸ್ವರೂಪವನ್ನು ಆಲಿಸಲು ಸಿದ್ಧರಿದ್ದೀರಿ ಎಂದರ್ಥ. ನಿಮ್ಮಲ್ಲಿ ಹೇಳಲು ಏನೂ ಇಲ್ಲ, ನೀವು ಸುಮ್ಮನೆ ಕೇಳುತ್ತೀರಿ. ಅದು ನಂದಿಯ ಗುಣ ಎಂದು ಸದ್ಗುರು ನಂದಿಯ ಮಹತ್ವವನ್ನು ವಿವರಿಸಿದರು.

ಮಹಾಶೂಲ (ಶಿವನ ತ್ರಿಶೂಲ) ಕುರಿತು ಸದ್ಗುರು ಮಾತಾಡುತ್ತಾ, ಇಡೀ ಸೃಷ್ಟಿಯು ಮೂರು ಅಂಶಗಳ ದ್ಯೋತಕವಾಗಿದೆ. ಸೃಷ್ಟಿ, ಸ್ಥಿತಿ ಮತ್ತು ಲಯ. ಭಾರತೀಯ ಸಂಸ್ಕೃತಿಯಲ್ಲಿ, ನಾವು ಈ ಮೂರು ಶಕ್ತಿಗಳನ್ನು ಬ್ರಹ್ಮ, ವಿಷ್ಣು ಮತ್ತು ಮಹೇಶ್ವರ ಎನ್ನುತ್ತೇವೆ. ಬ್ರಹ್ಮವು ಹುಟ್ಟಿನ ಬಗ್ಗೆಯಾದರೆ, ವಿಷ್ಣುವು ಅಸ್ತಿತ್ವದ ನಿರ್ವಹಣೆ ಮತ್ತು ಶಿವ ವಿನಾಶದ ಸೂಚಕನಾಗಿದ್ದಾನೆ ಎಂದರು.

ಆದಾಗ್ಯೂ, ಮೂಲ ರೂಪದಲ್ಲಿ ಈ ಮೂರು ಒಂದೇ. ಏಕೆಂದರೆ ಸೃಷ್ಟಿ ಮತ್ತು ನಿರ್ವಹಣೆ ಕೇವಲ ವಿನಾಶತೆಯ ಮಡಿಲಲ್ಲೇ ಅಸ್ತಿತ್ವದಲ್ಲಿದೆ. ಅದೇ ಮಹಾಶೂಲದ ಮಹತ್ವ ಮೇಲ್ನೋಟಕ್ಕೆ ಈ ಮೂರು ಬೇರೆ ಬೇರೆಯಾಗಿ ತೋರಿದರೂ, ನಿಜ ರೂಪದಲ್ಲಿ ಎಲ್ಲವೂ ಒಂದೇ ಎಂಬುದನ್ನು ನಿರಂತರವಾಗಿ ಸೂಚಿಸುವುದು ಎಂದರು.