
ಸದ್ಯ ಕರ್ನಾಟಕದಲ್ಲಿ ಮುಂಗಾರು ಮಳೆ ಶುರುವಾಗಿದೆ. ಒಂದು ಕಡೆ ರೈತರಿಗೆ ಸಂತಸ ಉಂಟಾದರೆ, ಮತ್ತೊಂದೆಡೆ ನಿಸರ್ಗ ಹಸಿರಿನಿಂದ ಕಂಗೊಳಿಸುತ್ತಿದೆ. ಹಲವೆಡೆ ಧಾರಾಕಾರ ಮಳೆ ಹಳ್ಳ, ಕೊಳ್ಳ, ನದಿಗಳು ಮೈದುಂಬಿ ಹರಿಯುತ್ತಿವೆ. ಅದೇ ರೀತಿಯಾಗಿ ಚಾರ್ಮಾಡಿ ಘಾಟ್ನಲ್ಲಿ ಜಲವೈಭವ ಸೃಷ್ಟಿಯಾಗಿದೆ.

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್ನಲ್ಲಿ ಮುಂಗಾರು ಮಳೆಗೆ ಜಲವೈಭವ ಸೃಷ್ಟಿಯಾಗಿದೆ. ಹಸಿರು ಬೆಟ್ಟಗಳ ನಡುವೆ ಹಾಲ್ನೊರೆಯಂತೆ ಜಲಪಾತಗಳು ಧುಮ್ಕಿಕ್ಕುತ್ತಿವೆ. ಹೀಗಾಗಿ ಚಾರ್ಮಾಡಿ ಘಾಟ್ ಸದ್ಯ ಕರ್ನಾಟಕದ ಊಟಿಯಾಗಿದೆ.

22 ಕಿಲೋಮೀಟರ್ ವ್ಯಾಪ್ತಿಯ ರಸ್ತೆಯಲ್ಲಿ ಸಾಗಿದರೇ ಸಾಕು ನೂರಾರು ಜಲಪಾತಗಳು ಕಾಣಸಿಗುತ್ತವೆ. 100 ಅಡಿ ಎತ್ತರದಿಂದ ಜಲಪಾತ ಧುಮ್ಕಿಕ್ಕುತ್ತಿದ್ದು, ಇದರ ಝುಳು ಝುಳು ನಿನಾದವನ್ನು ಕೇಳುತ್ತಿದ್ದರೆ ಫಿದಾ ಆಗುವುದಂತೂ ಗ್ಯಾರಂಟಿ.

ದಟ್ಟಕಾನನದ ಮಧ್ಯೆ ನೀರಿನಿಂದ ಪ್ರಕೃತಿಯೇ ಸೃಷ್ಟಿಸಿದ ಸಂಗೀತಕ್ಕೆ ಪ್ರವಾಸಿಗರು ಮೂಕವಿಸ್ಮಿತರಾಗುವುದಂತು ಸತ್ಯ. ನಿತ್ಯಹರಿದ್ವರ್ಣದಂತಹ ಅರಣ್ಯದಲ್ಲಿ ಪ್ರಕೃತಿಗೆ ಪ್ರಕೃತಿಯೇ ಕ್ಷೀರಾಭಿಷೇಕ ಮಾಡುತ್ತಿರುವುದನ್ನು ನೋಡಲು ಎರಡು ಕಣ್ಣುಗಳು ಸಾಲದು.

ರಸ್ತೆಯಲ್ಲಿ ನಿಂತು ಫೋಟೋ ಕ್ಲಿಕ್ಕಿಸಿಕೊಂಡು ಪ್ರವಾಸಿಗರು ಎಂಜಾಯ್ ಮಾಡಿದ್ದಾರೆ. ಒಟ್ಟಿನಲ್ಲಿ ಚಾರ್ಮಾಡಿ ಸೌಂದರ್ಯ ವರ್ಣಿಸುವುದಕ್ಕೆ ಪದ ಸಾಲದು, ಬರೆಯುವುದಕ್ಕೆ ಪುಟ ಸಾಲದು.