
ಚಂದ್ರದ್ರೋಣ ಪರ್ವತದಲ್ಲಿರುವ ಇನಾಂ ದತ್ತಾತ್ರೇಯ ಬಾಬಾಬುಡನ್ ಗಿರಿ ದರ್ಗಾ, ದತ್ತಪೀಠದಲ್ಲಿ ಡಿಸೆಂಬರ್ 24, 25 ಮತ್ತು 26ರಂದು ದತ್ತಜಯಂತಿ ನಡೆಯಲಿದೆ. ಹೀಗಾಗಿ ಡಿಸೆಂಬರ್ 22ರಿಂದ 27ರವರೆಗೆ ಈ ಪ್ರದೇಶದ ಪ್ರವಾಸಿ ತಾಣಗಳಿಗೆ ನಿರ್ಬಂಧ ಹೇರಲಾಗಿದೆ.

ಡಿಸೆಂಬರ್ 23, 24 ವಾರಾಂತ್ಯ ಇದೆ. 25ರಂದು ಸೋಮವಾರ ಕ್ರಿಸ್ಮಸ್ ಪ್ರಯುಕ್ತ ರಜೆ ಇದೆ. ಹೀಗಾಗಿ ಅನೇಕರು ಪ್ರವಾಸಕ್ಕೆ ಪ್ಲ್ಯಾನ್ ಮಾಡಿರುವ ಸಾಧ್ಯತೆ ಇದ್ದು, ಚಿಕ್ಕಮಗಳೂರಿನ ಪ್ರವಾಸಿ ತಾಣಗಳಿಗೆ ಭೇಟಿ ನೀಡಲು ಯೋಚಿಸಿರುವ ಸಾಧ್ಯತೆಯೂ ಇದೆ. ಹೀಗಾಗಿ ಜಿಲ್ಲಾಡಳಿತ ಮುಂಚಿತವಾಗಿಯೇ ಕಳೆದ ವಾರವೇ ಮಾಹಿತಿ ನೀಡಿತ್ತು.

ಮುಂಜಾಗ್ರತಾ ಕ್ರಮವಾಗಿ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ. ಯಾವೆಲ್ಲ ಪ್ರವಾಸಿ ತಾಣಗಳಿಗೆ ಇಂದಿನಿಂದ ನಿರ್ಬಂಧ ಹೇರಲಾಗಿದೆ ಎಂಬ ವಿವರವಾದ ಮಾಹಿತಿ ಇಲ್ಲಿದೆ.

ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ಗಾಳಿಕೆರೆ, ಮಾಣಿಕ್ಯಾಧಾರಾ ಪ್ರವಾಸಿ ತಾಣಗಳಿಗೆ ಪ್ರವೇಶ ನಿರ್ಬಂಧಿಸಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

ಚಂದ್ರದ್ರೋಣ ಪರ್ವತದ ಸಾಲಿನ ತಾಣಗಳಿಗೆ ಪ್ರವಾಸಿಗರಿಗೆ ನಿಷೇಧ ಹೇರಿರುವುದರಿಂದ ಕೊರೊನಾ ಆತಂಕದ ನಡುವೆ ಕಾಫಿನಾಡಿನ ಜನತೆ ನಿಟ್ಟುಸಿರು ಬಿಟ್ಟಿದ್ದಾರೆ. ಚಂದ್ರದ್ರೋಣ ಪರ್ವತಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಕೇರಳ ಪ್ರವಾಸಿಗರು ಆಗಮಿಸುತ್ತಿದ್ದರು. ಇದರಿಂದ ಕೋವಿಡ್ ಆತಂಕ ಹೆಚ್ಚಾಗಿತ್ತು.

ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ಮಾಣಿಕ್ಯಧಾರಕ್ಕೆ ಕೇರಳ ಪ್ರವಾಸಿಗರು ಆಗಮಿಸುತ್ತಿದ್ದರು. ಪರಿಣಾಮವಾಗಿ ಒಂದೇ ದಿನ ಚಿಕ್ಕಮಗಳೂರು ತಾಲೂಕಿನ ನಾಲ್ವರಲ್ಲಿ ಕೊರೊನಾ ಪಾಸಿಟಿವ್ ಕಂಡುಬಂದಿದೆ.

ಹೊರ ರಾಜ್ಯದ ಟ್ರಾವೆಲ್ ಹಿಸ್ಟರಿ ಇಲ್ಲದವರಲ್ಲೂ ಕೊರೊನಾ ಕಾಣಿಸಿಕೊಂಡಿತ್ತು. ಕೇರಳ ಪ್ರವಾಸಿಗರು, ಶಬರಿಮಲೆಗೆ ಹೋಗಿ ಬಂದವರಿಂದ ಸೋಂಕು ಹರಡಿರುವ ಆತಂಕದಲ್ಲಿ ಜನರಿದ್ದರು.