
ಬರ್ಮಿಂಗ್ ಹ್ಯಾಮ್ ನಲ್ಲಿ ನಡೆಯುತ್ತಿರುವ ಕಾಮನ್ ವೆಲ್ತ್ ಗೇಮ್ಸ್ 2022ರಲ್ಲಿ (Commonwealth Games 2022) ಭಾರತ ಭರ್ಜರಿ ಪ್ರದರ್ಶನ ತೋರುತ್ತಿದೆ. ಎರಡನೇ ದಿನ ಒಟ್ಟು ನಾಲ್ಕು ಪದಕವನ್ನು ಬಾಜಿಕೊಂಡಿದ್ದ ಭಾರತ ಮೂರನೇ ದಿನ ಎರಡು ಚಿನ್ನ ತನ್ನದಾಗಿಸಿದೆ.

ವೇಟ್ ಲಿಫ್ಟಿಂಗ್ ನಲ್ಲಿ ಭಾರತದ ಶಕ್ತಿ ಪ್ರದರ್ಶನ ಮುಂದುವರಿದಿದೆ. ಯುವ ವೇಟ್‌ಲಿಫ್ಟರ್ ಅಚಿಂತಾ ಶೆಯುಲಿ ಅವರು ಚಿನ್ನದ ಪದಕ ಗೆದ್ದು ಬೀಗಿದ್ದಾರೆ. ಪುರುಷರ 73kg ವಿಭಾಗದಲ್ಲಿ ಒಟ್ಟು 313 ಕೆಜಿ ಭಾರ ಎತ್ತುವ ಮೂಲಕ ವಿಶೇಷ ಸಾಧನೆ ಮಾಡಿದ 20 ವರ್ಷದ ವೇಟ್ ಲಿಫ್ಟರ್ ಬಂಗಾರಕ್ಕೆ (Gold) ಕೊರಳೊಡ್ಡಿದ್ದಾರೆ.

ಜೆರೆಮಿ ಲಾಲ್ರಿನ್ನುಂಗಾ ಕಾಮನ್‌ವೆಲ್ತ್ ಗೇಮ್ಸ್ 2022 ರಲ್ಲಿ ಭಾರತಕ್ಕೆ ಎರಡನೇ ಚಿನ್ನದ ಪದಕವನ್ನು ಗೆದ್ದುಕೊಟ್ಟರು. ಮೀರಾಬಾಯಿ ಚಾನು ನಂತರ, ಜೆರೆಮಿ ವೇಟ್‌ಲಿಫ್ಟಿಂಗ್‌ನಲ್ಲಿ ಒಟ್ಟು 300 ಕೆ.ಜಿ. ತೂಕ ಎತ್ತುವ ಮೂಲಕ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡರು.

ಮೀರಾಬಾಯಿ ಚಾನು ಭಾರತಕ್ಕೆ ಕಾಮನ್‌ವೆಲ್ತ್ ಗೇಮ್ಸ್ ನಲ್ಲಿ ಮೊದಲ ಚಿನ್ನದ ಪದಕವನ್ನು ತಂದುಕೊಟ್ಟರು. ಚಾನು 49 ಕೆಜಿ ತೂಕ ವಿಭಾಗದಲ್ಲಿ ಒಟ್ಟು 201 ಕೆಜಿ ಭಾರ ಎತ್ತುವ ಮೂಲಕ ದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದರು. ಸ್ನ್ಯಾಚ್ ನಲ್ಲಿ 88 ಕೆಜಿ ಮತ್ತು ಕ್ಲೀನ್ ಮತ್ತು ಜರ್ಕ್ ನಲ್ಲಿ 113 ಕೆಜಿ ಎತ್ತುವ ಮೂಲಕ ಪ್ರಶಸ್ತಿ ಗೆದ್ದು ದಾಖಲೆ ಕೂಡ ಮಾಡಿದರು.

ಸಂಕೇತ್ ಮಹಾದೇವ್ ಸಾಗರ್ ಕೂಡ ಪುರುಷರ ವೇಟ್ ಲಿಫ್ಟಿಂಗ್ ನಲ್ಲಿ ಭಾರತಕ್ಕೆ ಚೊಚ್ಚಲ ಪದಕ ಗೆದ್ದುಕೊಡುವಲ್ಲಿ ಯಶಸ್ವಿಯಾಗಿದ್ದಾರೆ. 21 ವರ್ಷದ ಮಹಾರಾಷ್ಟ್ರ ಮೂಲದ ವೇಟ್ ಲಿಫ್ಟರ್ ಬರೋಬ್ಬರಿ 248 ಕೆಜಿ ಭಾರ ಎತ್ತುವ ಮೂಲಕ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ್ದಾರೆ.

ಕರ್ನಾಟಕದ ವೇಟ್ ಲಿಫ್ಟರ್ ಗುರುರಾಜ್ ಪೂಜಾರಿ ಕಂಚಿನ ಪದಕವನ್ನು ಗೆದ್ದು ಮಿಂಚಿದ್ದಾರೆ. ಇವರು ಈ ಬಾರಿಯ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಭಾರತದ ಪರವಾಗಿ ಪದಕ ಗೆದ್ದ ಎರಡನೇ ಕ್ರೀಡಾಪಟು. ಒಟ್ಟು 269 ಕೆಜಿ ಭಾರ ಎತ್ತುವ ಮೂಲಕ ಪದಕಕ್ಕೆ ಕೊರಳೊಡ್ಡಿದ್ದಾರೆ.

55 ಕೆಜಿ ವಿಭಾಗದ ವೇಟ್ ಲಿಫ್ಟಿಂಗ್ ನಲ್ಲಿ ಬಿಂದ್ಯಾರಾಣಿ ದೇವಿ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ್ದಾರೆ. 114 ಕೆಜಿಯ ತನ್ನ ಎರಡನೇ ಕ್ಲೀನ್ ಮತ್ತು ಜರ್ಕ್ ಪ್ರಯತ್ನದಲ್ಲಿ ಬಿಂದ್ಯಾರಾಣಿ ವಿಫಲವಾದಾಗ ಕಂಚಿನ ಪದಕದ ನಿರೀಕ್ಷೆಯಿತ್ತು. ಆದರೆ, ಅಂತಿಮ ಲಿಫ್ಟ್ ನಲ್ಲಿ 116 ಕೆಜಿಯೊಂದಿಗೆ ಎರಡನೇ ಸ್ಥಾನಕ್ಕೇರಿದರು. ಈ ಮೂಲಕ ಬೆಳ್ಳಿ (Silver) ಪದಕವನ್ನು ಬಾಜಿಕೊಂಡರು.

ವಿಶೇಷ ಎಂದರೆ ಇದುವರೆಗೆ ಬಂದಿರುವ ಎಲ್ಲ ಪದಕಗಳು ವೇಟ್ ಲಿಫ್ಟಿಂಗ್ ನಿಂದಲೇ ಆಗಿದೆ. ಇದುವರೆಗೆ ಭಾರತ ಮೂರು ಚಿನ್ನ, 2 ಬೆಳ್ಳಿ ಹಾಗೂ 1 ಕಂಚು ಗೆದ್ದಿದೆ. ಪದಕಗಳ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ. 52 ಪದಕ ಗೆದ್ದಿರುವ ಆಸ್ಟ್ರೇಲಿಯಾ ಮೊದಲ ಸ್ಥಾನದಲ್ಲಿದೆ.