
ಕೆರಿಬಿಯನ್ ಪ್ರೀಮಿಯರ್ ಲೀಗ್ನಲ್ಲಿ ಬ್ಯಾಟ್ಸ್ಮನ್ಗಳ ಅಬ್ಬರ ಮುಂದುವರೆದಿದೆ. ಸಿಪಿಎಲ್ನ 16ನೇ ಪಂದ್ಯದಲ್ಲಿ ಗಯಾನಾ ಅಮೆಜಾನ್ ವಾರಿಯರ್ಸ್ ಭರ್ಜರಿ ಪ್ರದರ್ಶನ ನೀಡುವ ಮೂಲಕ ಬಾರ್ಬಡೋಸ್ ರಾಯಲ್ಸ್ ವಿರುದ್ದ ಗೆಲುವು ದಾಖಲಿಸಿದೆ. ಈ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದು ಚಂದ್ರಪಾಲ್ ಹೇಮರಾಜ್.

ಮೊದಲು ಬ್ಯಾಟ್ ಮಾಡಿದ ಬಾರ್ಬಡೋಸ್ ರಾಯಲ್ಸ್ ತಂಡ ನಿಗದಿತ 20 ಓವರ್ ಗಳಲ್ಲಿ 130 ರನ್ ಗಳಿಸಿತು. ಈ ಸುಲಭ ಗುರಿಯನ್ನು ಬೆನ್ನತ್ತಿದ ಗಯಾನಾ ಅಮೆಜಾನ್ ತಂಡಕ್ಕೆ ಚಂದ್ರಪಾಲ್ ಹೇಮರಾಜ್ ಹಾಗೂ ಬ್ರೆಂಡನ್ ಕಿಂಗ್ ಭರ್ಜರಿ ಆರಂಭ ಒದಗಿಸಿದರು. ಮೊದಲ ಓವರ್ನಿಂದಲೇ ರಾಯಲ್ಸ್ ಬೌಲರುಗಳನ್ನು ದಂಡಿಸಿದ ಹೇಮರಾಜ್ ಆರಂಭದಲ್ಲೇ ರನ್ ಗತಿ ಹೆಚ್ಚಿಸಿದ್ದರು.

ಅದರಂತೆ 10 ಓವರ್ ವೇಳಗೆ ತಂಡದ ಮೊತ್ತ 100ರ ಗಡಿ ತಲುಪಿತ್ತು. ಆದರೆ ಇದರಲ್ಲಿ ಬ್ರೆಂಡನ್ ಕಿಂಗ್ ಅವರ ಕೊಡುಗೆ ಕೇವಲ 19 ಎಂಬುದು ವಿಶೇಷ. ಉಳಿದೆಲ್ಲಾ ರನ್ಗಳು ಹೇಮರಾಜ್ ಬ್ಯಾಟ್ನಿಂದ ಹರಿದು ಬಂದಿದ್ದವು. ಇನ್ನು ತಂಡದ ಮೊತ್ತ 103 ರನ್ ಆಗಿದ್ದ ವೇಳೆ 11ನೇ ಓವರ್ನಲ್ಲಿ ಬ್ರೆಂಡನ್ ಕಿಂಗ್ ವಿಕೆಟ್ ಒಪ್ಪಿಸಿ ಹೊರನಡೆದರು.

ಆದರೆ ಮತ್ತೊಂದೆಡೆ ಆರ್ಭಟ ಮುಂದುವರೆಸಿದ ಹೇಮರಾಜ್ 56 ಎಸೆತಗಳಲ್ಲಿ 14 ಬೌಂಡರಿ ಮತ್ತು 5 ಭರ್ಜರಿ ಸಿಕ್ಸರ್‌ಗಳೊಂದಿಗೆ 105 ರನ್ ಗಳ ಅಜೇಯ ಶತಕದ ಇನ್ನಿಂಗ್ಸ್ ಆಡಿದರು. ಪರಿಣಾಮ 14.2 ಓವರ್‌ಗಳಲ್ಲಿ ಗುರಿ ಮುಟ್ಟುವ ಮೂಲಕ ಗಯಾನಾ ಅಮೆಜಾನ್ ವಾರಿಯರ್ಸ್ 9 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿತು.

ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ ಹೇಮರಾಜ್ ಏಕಾಂಗಿಯಾಗಿ ಪಂದ್ಯದ ಶೇ. 77 ರಷ್ಟು ರನ್ಗಳಿಸಿದ್ದರು. ಇನ್ನು ಬಿರುಸಿನ ಬ್ಯಾಟಿಂಗ್ ಮೂಲಕ ಚಂದ್ರಪಾಲ್ ಹೇಮರಾಜ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.