Updated on: Dec 08, 2021 | 10:45 PM
ಟೀಮ್ ಇಂಡಿಯಾ ಸೀಮಿತ ಓವರ್ಗಳ ನಾಯಕನಾಗಿ ರೋಹಿತ್ ಶರ್ಮಾ ಆಯ್ಕೆಯಾಗಿದ್ದಾರೆ. ಈ ಹಿಂದೆ ಟಿ20 ತಂಡದ ನಾಯಕರಾಗಿದ್ದ ರೋಹಿತ್ ಅವರನ್ನು ಇದೀಗ ಏಕದಿನ ತಂಡಕ್ಕೂ ಕ್ಯಾಪ್ಟನ್ ಮಾಡಲಾಗಿದೆ. ಇನ್ನು ವಿರಾಟ್ ಕೊಹ್ಲಿ ಟೆಸ್ಟ್ ತಂಡದ ನಾಯಕರಾಗಿ ಮಾತ್ರ ಮುಂದುವರೆಯಲಿದ್ದಾರೆ.
ದಕ್ಷಿಣ ಆಫ್ರಿಕಾ ಸರಣಿಯೊಂದಿಗೆ ರೋಹಿತ್ ಶರ್ಮಾ ಏಕದಿನ ತಂಡದ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ಬಿಸಿಸಿಐ ತಿಳಿಸಿದೆ. ಇದಾಗ್ಯೂ ತಂಡದ ಉಪನಾಯಕ ಯಾರೆಂಬುದನ್ನು ತಿಳಿಸಿಲ್ಲ. ಈ ಹಿಂದೆ ವಿರಾಟ್ ಕೊಹ್ಲಿ ನಾಯಕರಾಗಿದ್ದ ವೇಳೆ ರೋಹಿತ್ ಶರ್ಮಾ ಉಪನಾಯಕರಾಗಿದ್ದರು. ಇದೀಗ ಹಿಟ್ಮ್ಯಾನ್ ನಾಯಕನಾಗಿ ಬಡ್ತಿ ಪಡೆದಿದ್ದಾರೆ. ಹೀಗಾಗಿ ಉಪನಾಯಕನಾಗಿ ಯಾರು ಆಯ್ಕೆ ಆಗಲಿದ್ದಾರೆ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಈ ಪ್ರಶ್ನೆಗೆ ಸದ್ಯ ಮೂರು ಉತ್ತರಗಳು ಸಿಗುತ್ತಿವೆ...ಅವುಗಳೆಂದರೆ...
ಕೆಎಲ್ ರಾಹುಲ್: ಟೀಮ್ ಇಂಡಿಯಾ ಟಿ20 ತಂಡದ ಉಪನಾಯಕರಾಗಿರುವ ಕೆಎಲ್ ರಾಹುಲ್ ಅವರನ್ನೇ ಬಿಸಿಸಿಐ ಏಕದಿನ ತಂಡಕ್ಕೂ ಉಪನಾಯಕನಾಗಿ ಆಯ್ಕೆ ಮಾಡಬಹುದು. ಏಕೆಂದರೆ ರಾಹುಲ್ ಈಗಾಗಲೇ ಐಪಿಎಲ್ನಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಮುನ್ನಡೆಸಿದ ಅನುಭವ ಹೊಂದಿದ್ದು, ಜೊತೆಗೆ ಟಿ20 ತಂಡದ ಉಪನಾಯಕನಾಗಿ ಕೂಡ ಹೊಸ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ.
ರಿಷಭ್ ಪಂತ್: ಒಂದೆಡೆ ಕೆಎಲ್ ರಾಹುಲ್ಗೆ ಟಿ20 ತಂಡದ ಉಪನಾಯಕನ ಜವಾಬ್ದಾರಿ ನೀಡಿರುವ ಕಾರಣ, ಮತ್ತೋರ್ವ ಯುವ ಆಟಗಾರ ರಿಷಭ್ ಪಂತ್ ಅವರಿಗೆ ಏಕದಿನ ತಂಡ ಉಪನಾಯಕನ ಸ್ಥಾನ ನೀಡುವ ಸಾಧ್ಯತೆಯಿದೆ. ಏಕೆಂದರೆ ಭವಿಷ್ಯದ ದೃಷ್ಟಿಯಲ್ಲಿ ಟೀಮ್ ಇಂಡಿಯಾ ಈಗಲೇ ನಾಯಕನನ್ನು ಆಯ್ಕೆ ಮಾಡುವ ತಯಾರಿಯಲ್ಲಿದೆ. ಹೀಗಾಗಿ ದೆಹಲಿ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮುನ್ನಡೆಸಿದ ಅನುಭವ ಇರುವ ಪಂತ್ಗೆ ಮಣೆ ಹಾಕಬಹುದು.
ಜಸ್ಪ್ರೀತ್ ಬುಮ್ರಾ: ಈ ಹಿಂದಿನಿಂದಲೂ ಟೀಮ್ ಇಂಡಿಯಾ ನಾಯಕರುಗಳ ಪಟ್ಟಿಯಲ್ಲಿ ಬೌಲರುಗಳಿಗೆ ಮಣೆ ಹಾಕುತ್ತಿಲ್ಲ ಎಂಬ ದೂರುಗಳು ಕೇಳಿ ಬರುತ್ತಿದೆ. ಅದರಲ್ಲೂ ಇತ್ತೀಚೆಗೆ ವೀರೇಂದ್ರ ಸೆಹ್ವಾಗ್ ಸೇರಿದಂತೆ ಕೆಲ ಮಾಜಿ ಆಟಗಾರರು ಉಪನಾಯಕನ ಸ್ಥಾನ ಬೌಲರುಗಳಿಗೆ ನೀಡಬೇಕೆಂದು ಬಹಿರಂಗವಾಗಿಯೇ ಹೇಳಿದ್ದರು. ಅದರಲ್ಲೂ ಬುಮ್ರಾ ಉಪನಾಯಕನ ಸ್ಥಾನಕ್ಕೆ ಸೂಕ್ತ ವ್ಯಕ್ತಿ ಎಂದು ಸೆಹ್ವಾಗ್ ಅಭಿಪ್ರಾಯಪಟ್ಟಿದ್ದರು. ಹೀಗಾಗಿ ಏಕದಿನ ತಂಡದ ಉಪನಾಯಕನಾಗಿ ಜಸ್ಪ್ರೀತ್ ಬುಮ್ರಾ ಕಾಣಿಸಿಕೊಂಡರೂ ಅಚ್ಚರಿಪಡಬೇಕಿಲ್ಲ.