
IPL 2026: ಇಂಡಿಯನ್ ಪ್ರೀಮಿಯರ್ ಲೀಗ್ನ 22ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಹಾಗೂ ಲಕ್ನೋ ಸೂಪರ್ ಜೈಂಟ್ಸ್ (LSG) ತಂಡಗಳು ಮುಖಾಮುಖಿಯಾಗಲಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಇಂದು (ಏ.15) ನಡೆಯಲಿರುವ ಈ ಪಂದ್ಯಕ್ಕೆ ಐವರು ಆಟಗಾರರು ಅಲಭ್ಯರಾಗಲಿದ್ದಾರೆ. ಆ ಆಟಗಾರರು ಯಾರೆಂದರೆ...

ಜೋಶ್ ಇಂಗ್ಲಿಸ್: ಲಕ್ನೋ ಸೂಪರ್ ಜೈಂಟ್ಸ್ ತಂಡದ ವಿಕೆಟ್ ಕೀಪರ್ ಬ್ಯಾಟರ್ ಜೋಶ್ ಇಂಗ್ಲಿಸ್ ಇನ್ನೂ ಕೂಡ ಭಾರತಕ್ಕೆ ಆಗಮಿಸಿಲ್ಲ. ವೈಯುಕ್ತಿಕ ಕಾರಣಗಳಿಂದಾಗಿ ಅವರು ಆಸ್ಟ್ರೇಲಿಯಾದಲ್ಲಿದ್ದು, ಐಪಿಎಲ್ನ ದ್ವಿತೀಯಾರ್ಧದ ಪಂದ್ಯದ ವೇಳೆ ಎಲ್ಎಸ್ಜಿ ತಂಡವನ್ನು ಕೂಡಿಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.

ನುವಾನ್ ತುಷಾರ: ಫಿಟ್ನೆಸ್ ಸಮಸ್ಯೆಯಿಂದ ಬಳಲುತ್ತಿರುವ ಶ್ರೀಲಂಕನ್ ವೇಗಿ ನುವಾನ್ ತುಷಾರಗೆ ಶ್ರೀಲಂಕಾ ಕ್ರಿಕೆಟ್ ಬೋರ್ಡ್ ಇನ್ನೂ ಸಹ ಎನ್ಒಸಿ ನೀಡಿಲ್ಲ. ಇದೇ ಕಾರಣದಿಂದಾಗಿ ಅವರು ಈವರೆಗೆ ಆರ್ಸಿಬಿ ತಂಡವನ್ನು ಕೂಡಿಕೊಂಡಿಲ್ಲ. ಹೀಗಾಗಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯಕ್ಕೂ ನುವಾನ್ ತುಷಾರ ಅಲಭ್ಯರಾಗಲಿದ್ದಾರೆ.

ಜೋಶ್ ಹೇಝಲ್ವುಡ್: ಆರ್ಸಿಬಿ ತಂಡದ ಪ್ರಮುಖ ವೇಗಿ ಜೋಶ್ ಹೇಝಲ್ವುಡ್ ಫಿಟ್ನೆಸ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದೇ ಕಾರಣಕ್ಕೆ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿದಿರಲಿಲ್ಲ. ಅಷ್ಟೇ ಅಲ್ಲದೆ ಮಂಗಳವಾರ ನಡೆದ ಆರ್ಸಿಬಿ ತಂಡದ ಅಭ್ಯಾಸಕ್ಕೂ ಗೈರಾಗಿದ್ದರು. ಹೀಗಾಗಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯಕ್ಕೂ ಹೇಝಲ್ವುಡ್ ಅಲಭ್ಯರಾಗಲಿದ್ದಾರೆ.

ಯಶ್ ದಯಾಳ್: ವೈಯಕ್ತಿಕ ಕಾರಣಗಳಿಂದಾಗಿ ಯಶ್ ದಯಾಳ್ ಈ ಬಾರಿಯ ಐಪಿಎಲ್ ಆವೃತ್ತಿಯಿಂದ ಸಂಪೂರ್ಣವಾಗಿ ಹೊರಗುಳಿದಿದ್ದಾರೆ. ಹೀಗಾಗಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲೂ ಯಶ್ ದಯಾಳ್ ಕಾಣಿಸಿಕೊಳ್ಳುವುದಿಲ್ಲ.