
ಭಾರತ ಮತ್ತು ಇಂಗ್ಲೆಂಡ್ ನಡುವಣ 4ನೇ ಟೆಸ್ಟ್ ಪಂದ್ಯವು ನಾಳೆಯಿಂದ (ಫೆ.23) ಶುರುವಾಗಲಿದೆ. ರಾಂಚಿಯಲ್ಲಿ ನಡೆಯಲಿರುವ ಈ ಪಂದ್ಯದಿಂದ ಟೀಮ್ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ ವಿಶ್ರಾಂತಿಯ ಕಾರಣ ಹೊರಗುಳಿದಿದ್ದಾರೆ. ಹೀಗಾಗಿ ಅವರ ಬದಲಿಗೆ ಯಾರು ಕಣಕ್ಕಿಳಿಯಲಿದ್ದಾರೆ ಎಂಬುದೇ ಕುತೂಹಲ.

ಏಕೆಂದರೆ ಭಾರತ ತಂಡದ ಇಬ್ಬರು ವೇಗಿಗಳು, ಮತ್ತಿಬ್ಬರು ಆಲ್ರೌಂಡರ್ಗಳು ಅವಕಾಶವನ್ನು ಎದುರು ನೋಡುತ್ತಿದ್ದಾರೆ. ಈ ನಾಲ್ವರಲ್ಲಿ ಒಬ್ಬರಿಗೆ ಟೀಮ್ ಇಂಡಿಯಾದಲ್ಲಿ ಚಾನ್ಸ್ ಸಿಗುವ ಸಾಧ್ಯತೆಯಿದೆ. ಆ ಆಟಗಾರರು ಯಾರು, ಬುಮ್ರಾ ಸ್ಥಾನದಲ್ಲಿ ಯಾರಿಗೆ ಅವಕಾಶ ಸಿಗಬಹುದು ಎಂಬುದನ್ನು ನೋಡೋಣ...

ಮುಖೇಶ್ ಕುಮಾರ್: ಟೀಮ್ ಇಂಡಿಯಾ ಪರ ಈಗಾಗಲೇ 3 ಟೆಸ್ಟ್ ಪಂದ್ಯಗಳನ್ನಾಡಿರುವ ಮುಖೇಶ್ ಕುಮಾರ್ ಒಟ್ಟು 7 ವಿಕೆಟ್ಗಳನ್ನು ಕಬಳಿಸಿದ್ದಾರೆ. ಹಾಗೆಯೇ ಫಸ್ಟ್ ಕ್ಲಾಸ್ ಕ್ರಿಕೆಟ್ನಲ್ಲಿ 43 ಪಂದ್ಯಗಳಿಂದ 166 ವಿಕೆಟ್ಗಳನ್ನು ಪಡೆದಿದ್ದಾರೆ. ಹೀಗಾಗಿ ಬುಮ್ರಾ ಸ್ಥಾನದಲ್ಲಿ ಮುಖೇಶ್ಗೆ ಚಾನ್ಸ್ ಸಿಗುವ ಸಾಧ್ಯತೆಯಿದೆ.

ಅಕ್ಷರ್ ಪಟೇಲ್: ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವು ಆಲ್ರೌಂಡರ್ನನ್ನು ಕಣಕ್ಕಿಳಿಸಲು ನಿರ್ಧರಿಸಿದರೆ ಅಕ್ಷರ್ ಪಟೇಲ್ ಸ್ಥಾನ ಪಡೆಯಲಿದ್ದಾರೆ. ಟೀಮ್ ಇಂಡಿಯಾ ಪರ 14 ಟೆಸ್ಟ್ ಪಂದ್ಯಗಳಿಂದ 55 ವಿಕೆಟ್ ಪಡೆದಿರುವ ಅಕ್ಷರ್ ಮೊದಲೆರಡು ಪಂದ್ಯಗಳಲ್ಲಿ ಕಣಕ್ಕಿಳಿದಿದ್ದರು. ಆದರೆ ಮೂರನೇ ಪಂದ್ಯದಿಂದ ಹೊರಗುಳಿದಿದ್ದರು. ಇದೀಗ ಮತ್ತೆ ಅವರಿಗೆ ಅವಕಾಶ ನೀಡುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.

ಆಕಾಶ್ ದೀಪ್: ಟೀಮ್ ಇಂಡಿಯಾ ಪರ ಪಾದರ್ಪಣೆ ಮಾಡುವುದನ್ನು ಆಕಾಶ್ ದೀಪ್ ಎದುರು ನೋಡುತ್ತಿದ್ದಾರೆ. ಫಸ್ಟ್ ಕ್ಲಾಸ್ ಕ್ರಿಕೆಟ್ನಲ್ಲಿ 30 ಪಂದ್ಯಗಳನ್ನಾಡಿರುವ ಆಕಾಶ್ ಬರೋಬ್ಬರಿ 104 ವಿಕೆಟ್ಗಳನ್ನು ಕಬಳಿಸಿದ್ದಾರೆ. ಹೀಗಾಗಿ ಬುಮ್ರಾ ಬದಲಿಗೆ ಬೆಂಗಾಳ್ ವೇಗಿಯನ್ನು ಕಣಕ್ಕಿಳಿಸಿದರೂ ಅಚ್ಚರಿಪಡಬೇಕಿಲ್ಲ.

ವಾಷಿಂಗ್ಟನ್ ಸುಂದರ್: ಭಾರತದ ಪರ 4 ಟೆಸ್ಟ್ ಪಂದ್ಯಗಳನ್ನಾಡಿರುವ ವಾಷಿಂಗ್ಟನ್ ಸುಂದರ್ 6 ವಿಕೆಟ್ಗಳನ್ನು ಕಬಳಿಸಿದ್ದಾರೆ. ಹಾಗೆಯೇ ಬ್ಯಾಟಿಂಗ್ನಲ್ಲಿ 265 ರನ್ ಕಲೆಹಾಕಿದ್ದಾರೆ. 2021 ರ ಬಳಿಕ ಟೀಮ್ ಇಂಡಿಯಾದಲ್ಲಿ ಅವಕಾಶ ವಂಚಿತರಾಗಿರುವ ವಾಷಿಂಗ್ಟನ್ ಸುಂದರ್ ಈ ಬಾರಿ ಚಾನ್ಸ್ ಸಿಗುವುದನ್ನು ಎದುರು ನೋಡುತ್ತಿದ್ದಾರೆ.

ಈ ನಾಲ್ವರಲ್ಲಿ ಒಬ್ಬರು ಜಸ್ಪ್ರೀತ್ ಬುಮ್ರಾ ಸ್ಥಾನದಲ್ಲಿ ಟೀಮ್ ಇಂಡಿಯಾ ಪರ ಕಣಕ್ಕಿಳಿಯುವುದು ಖಚಿತ. ಆದರೆ ಆ ಅದೃಷ್ಟ ಯಾರಿಗೆ ಸಿಗಲಿದೆ ಎಂಬುದೇ ಈಗ ಕುತೂಹಲ.

ಭಾರತ ಟೆಸ್ಟ್ ತಂಡ: ರೋಹಿತ್ ಶರ್ಮಾ (ನಾಯಕ), ಜಸ್ಪ್ರೀತ್ ಬುಮ್ರಾ (ಉಪನಾಯಕ), ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್, ರಜತ್ ಪಾಟಿದಾರ್, ಸರ್ಫರಾಝ್ ಖಾನ್, ಧ್ರುವ್ ಜುರೆಲ್ (ವಿಕೆಟ್ ಕೀಪರ್), ಕೆಎಸ್ ಭರತ್ (ವಿಕೆಟ್ ಕೀಪರ್), ಆರ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಮುಖೇಶ್ ಕುಮಾರ್, ಆಕಾಶ್ ದೀಪ್, ದೇವದತ್ ಪಡಿಕ್ಕಲ್.