
ಟಿ೨೦ ಕ್ರಿಕೆಟ್‌ನಲ್ಲಿ ಅಭಿಷೇಕ್ ಶರ್ಮಾ (Abhishek Sharma) ಆರ್ಭಟ ಮುಂದುವರೆದಿದೆ. ಅದು ಸಹ ಸಿಡಿಲಬ್ಬರದ ಬ್ಯಾಟಿಂಗ್‌ನೊಂದಿಗೆ. ಅಂದರೆ ಅತ್ಯುತ್ತಮ ಸ್ಟ್ರೈಕ್ ರೇಟ್ನೊಂದಿಗೆ ಇದೀಗ ಅಭಿ, ಟಿಮ್ ಡೇವಿಡ್ ಅವರ ವಿಶ್ವ ದಾಖಲೆಯನ್ನು ಉಡೀಸ್ ಮಾಡಿದ್ದಾರೆ.

ಅಹಮದಾಬಾದ್ನಲ್ಲಿ ನಡೆದ ಸೌತ್ ಆಫ್ರಿಕಾ ವಿರುದ್ಧದ 5ನೇ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದ ಅಭಿಷೇಕ್ ಶರ್ಮಾ 21 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 6 ಫೋರ್ ಗಳೊಂದಿಗೆ 34 ರನ್ ಬಾರಿಸಿದರು. ಅದು ಕೂಡ 161 ರ ಸ್ಟ್ರೈಕ್ ರೇಟ್ ನಲ್ಲಿ. ಇದರೊಂದಿಗೆ ಟಿ೨೦ ಕ್ರಿಕೆಟ್‌ನಲ್ಲಿ ಅತ್ಯಧಿಕ ಸ್ಟ್ರೈಕ್ ರೇಟ್ನಲ್ಲಿ ಸಾವಿರಕ್ಕೂ ಅಧಿಕ ರನ್ ಕಲೆಹಾಕಿದ ವಿಶ್ವ ದಾಖಲೆ ಅಭಿಷೇಕ್ ಶರ್ಮಾ ಪಾಲಾಯಿತು.

ಇದಕ್ಕೂ ಮುನ್ನ ಈ ವಿಶ್ವ ದಾಖಲೆ ಆಸ್ಟ್ರೇಲಿಯಾದ ಟಿಮ್ ಡೇವಿಡ್ ಹೆಸರಿನಲ್ಲಿತ್ತು. ಟಿ೨೦ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 58 ಇನಿಂಗ್ಸ್ ಆಡಿರುವ ಟಿಮ್ ಡೇವಿಡ್ 168.89ರ ಸ್ಟ್ರೈಕ್ ರೇಟ್ ನಲ್ಲಿ ಬರೋಬ್ಬರಿ 1596 ರನ್ ಕಲೆಹಾಕಿದ್ದಾರೆ.

ಇದೀಗ ಈ ವಿಶ್ವ ದಾಖಲೆಯನ್ನು ಮುರಿಯುವಲ್ಲಿ ಅಭಿಷೇಕ್ ಶರ್ಮಾ ಯಶಸ್ವಿಯಾಗಿದ್ದಾರೆ. ಭಾರತದ ಪರ ಈವರೆಗೆ 32 ಇನಿಂಗ್ಸ್ ಆಡಿರುವ ಅಭಿಷೇಕ್ 188.03 ಸ್ಟ್ರೈಕ್ ರೇಟ್ ನಲ್ಲಿ ಬರೋಬ್ಬರಿ 1115 ರನ್ ಕಲೆಹಾಕಿದ್ದಾರೆ. ಈ ಮೂಲಕ ಟಿ೨೦ ಇತಿಹಾಸದಲ್ಲೇ ಅತ್ಯಧಿಕ ಸ್ಟ್ರೈಕ್ ರೇಟ್ ನಲ್ಲಿ ಸಾವಿರಕ್ಕೂ ಅಧಿಕ ರನ್ ಗಳಿಸಿದ ವಿಶ್ವ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಅಷ್ಟೇ ಅಲ್ಲದೆ ಈ ವರ್ಷ 54 ಸಿಕ್ಸ್ ಸಿಡಿಸುವ ಮೂಲಕ 2025 ರಲ್ಲಿ ಟಿ೨೦ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸಿಕ್ಸರ್ ಗಳ ಅರ್ಧಶತಕ ಪೂರೈಸಿದ ಏಕೈಕ ಬ್ಯಾಟರ್ ಎಂಬ ಹೆಗ್ಗಳಿಕೆಯನ್ನು ಸಹ ತಮ್ಮದಾಗಿಸಿಕೊಂಡಿದ್ದಾರೆ. ಒಟ್ಟಿನಲ್ಲಿ ಟಿ೨೦ ಕ್ರಿಕೆಟ್ ಕೆರಿಯರ್ನ ಆರಂಭದಲ್ಲೇ ಅಭಿಷೇಕ್ ಶರ್ಮಾ ಭರ್ಜರಿ ದಾಖಲೆ ಬರೆಯುತ್ತಿದ್ದು, ಈ ದಾಖಲೆಗಳೊಂದಿಗೆ ಮುಂಬರುವ ದಿನಗಳಲ್ಲಿ ಮತ್ತಷ್ಟು ವಿಶ್ವ ದಾಖಲೆಗಳನ್ನು ತಮ್ಮದಾಗಿಸಿಕೊಳ್ಳುವುದರಲ್ಲಿ ಡೌಟೇ ಇಲ್ಲ.