
ಟಿ20 ಕ್ರಿಕೆಟ್ನಲ್ಲಿ ಯಂಗ್ ಗನ್ ಅಭಿಷೇಕ್ ಶರ್ಮಾ (Abhishek Sharma) ಆರ್ಭಟ ಮುಂದುವರೆದಿದೆ. ಈ ಆರ್ಭಟದೊಂದಿಗೆ ಯುವ ದಾಂಡಿಗ ವಿಶೇಷ ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾರೆ. ಅದು ಸಹ ಸತತ 30+ ರನ್ ಕಲೆಹಾಕುವ ಮೂಲಕ ಎಂಬುದೇ ವಿಶೇಷ. ಅಂದರೆ ಕಳೆದ 7 ಪಂದ್ಯಗಳಲ್ಲೂ ಅಭಿಷೇಕ್ 30 ಕ್ಕಿಂತ ಕಡಿಮೆ ರನ್ ಗಳಿಸಿಲ್ಲ.

ಏಷ್ಯಾಕಪ್ ಟೂರ್ನಿಗೂ ಮುನ್ನ ಅಭಿಷೇಕ್ ಶರ್ಮಾ ಇಂಗ್ಲೆಂಡ್ ವಿರುದ್ಧದ ಸರಣಿಯ ಕೊನೆಯ ಪಂದ್ಯದಲ್ಲಿ 137 ರನ್ ಬಾರಿಸಿ ಅಬ್ಬರಿಸಿದ್ದರು. ಈ ಭರ್ಜರಿ ಶತಕದ ಬಳಿಕ ಇದೀಗ ಏಷ್ಯಾಕಪ್ನಲ್ಲಿ 30, 31, 38, 74, 75 ಹಾಗೂ 61 ರನ್ಗಳನ್ನು ಕಲೆಹಾಕಿದ್ದಾರೆ.

ಈ ಮೂಲಕ ಟಿ20 ಕ್ರಿಕೆಟ್ನಲ್ಲಿ ಸತತವಾಗಿ ಅತೀ ಹೆಚ್ಚು ಬಾರಿ 30+ ರನ್ ಕಲೆಹಾಕಿದ ವಿಶ್ವದ ಮೊದಲ ಎಡಗೈ ದಾಂಡಿಗ ಹಾಗೂ ಅತ್ಯಂತ ಕಿರಿಯ ಬ್ಯಾಟರ್ ವಿಶ್ವ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಅಲ್ಲದೆ ಏಷ್ಯಾಕಪ್ ಇತಿಹಾಸದಲ್ಲೇ 300+ ರನ್ ಗಳಿಸಿದ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

ಇದಕ್ಕೂ ಮುನ್ನ ಅಭಿಷೇಕ್ ಶರ್ಮಾ ಅತೀ ಕಡಿಮೆ ಇನಿಂಗ್ಸ್ಗಳ ಮೂಲಕ 50 ಸಿಕ್ಸ್ ಪೂರೈಸಿದ ವಿಶ್ವ ದಾಖಲೆ ನಿರ್ಮಿಸಿದ್ದರು. ವೆಸ್ಟ್ ಇಂಡೀಸ್ ಪರ ಆರಂಭಿಕನಾಗಿ ಕಣಕ್ಕಿಳಿದಿದ್ದ ಎವಿನ್ ಲೂಯಿಸ್ (366 ಎಸೆತಗಳು) ಹೆಸರಿನಲ್ಲಿದ್ದ ಈ ದಾಖಲೆಯನ್ನು ಅಭಿಷೇಕ್ ಕೇವಲ 331 ಎಸೆತಗಳಲ್ಲಿ ಅಳಿಸಿ ಹಾಕಿದ್ದರು.

ಅಲ್ಲದೆ ಏಷ್ಯಾಕಪ್ ಟೂರ್ನಿಯೊಂದರಲ್ಲಿ ಅತೀ ಹೆಚ್ಚು ಸಿಕ್ಸ್ ಬಾರಿಸಿದ ದಾಖಲೆಯನ್ನು ಕೂಡ ಅಭಿಷೇಕ್ ಶರ್ಮಾ ತಮ್ಮದಾಗಿಸಿಕೊಂಡಿದ್ದಾರೆ. ಈ ಮೊದಲು ಈ ಭರ್ಜರಿ ದಾಖಲೆ ಶ್ರೀಲಂಕಾದ ಸನತ್ ಜಯಸೂರ್ಯ (14) ಹೆಸರಿನಲ್ಲಿತ್ತು. ಆದರೆ ಈ ಬಾರಿಯ ಟೂರ್ನಿಯಲ್ಲಿ ಅಭಿಷೇಕ್ ಶರ್ಮಾ 19 ಸಿಕ್ಸ್ ಸಿಡಿಸಿ ಹೊಸ ಇತಿಹಾಸ ನಿರ್ಮಿಸಿದ್ದಾರೆ.

ಒಟ್ಟಿನಲ್ಲಿ ಅಭಿಷೇಕ್ ಶರ್ಮಾ ಆರ್ಭಟದೊಂದಿಗೆ ಏಷ್ಯಾಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ಸತತ 6 ಪಂದ್ಯಗಳನ್ನು ಗೆದ್ದು ಫೈನಲ್ಗೆ ಎಂಟ್ರಿ ಕೊಟ್ಟಿದೆ. ಸೆಪ್ಟೆಂಬರ್ 28 ರಂದು ನಡೆಯಲಿರುವ ಅಂತಿಮ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ್ ತಂಡಗಳು ಮುಖಾಮುಖಿಯಾಗಲಿದ್ದು, ಈ ಪಂದ್ಯದಲ್ಲೂ ಅಬ್ಬರಿಸುವ ಮೂಲಕ ಅಭಿಷೇಕ್ ಭಾರತ ತಂಡಕ್ಕೆ ಚಾಂಪಿಯನ್ ಪಟ್ಟ ತಂದುಕೊಡುವ ವಿಶ್ವಾಸದಲ್ಲಿದ್ದಾರೆ.
Published On - 8:26 am, Sat, 27 September 25