
ಟೀಮ್ ಇಂಡಿಯಾದ ಯಂಗ್ ಸೆನ್ಸೇಷನ್ ಅಭಿಷೇಕ್ ಶರ್ಮಾ (Abhishek Sharma) ಸೌತ್ ಆಫ್ರಿಕಾ ವಿರುದ್ಧದ ಟಿ20 ಸರಣಿಗಾಗಿ ಸಜ್ಜಾಗುತ್ತಿದ್ದಾರೆ. ಈ ಸರಣಿಯ ಮೊದಲ ಪಂದ್ಯವು ನಾಳೆ (ಡಿ.9) ಕಟಕ್ನಲ್ಲಿ ನಡೆಯಲಿದೆ. ಈ ಪಂದ್ಯಕ್ಖೂ ಮುನ್ನವೇ ಅಭಿಷೇಕ್ ಶರ್ಮಾಗೆ ಗೂಗಲ್ ಕಡೆಯಿಂದ ಗುಡ್ ನ್ಯೂಸ್ವೊಂದು ಸಿಕ್ಕಿದೆ.

ಗೂಗಲ್ 2025 ರ ಅತ್ಯಂತ ಟ್ರೆಂಡಿಂಗ್ ಆಟಗಾರರ ಪಟ್ಟಿಯನ್ನು ಪ್ರಕಟಿಸಿದೆ. ಅಂದರೆ ಯಾವ ದೇಶದಲ್ಲಿ ಯಾವ ಆಟಗಾರನನ್ನು ಗೂಗಲ್‌ನಲ್ಲಿ ಹೆಚ್ಚು ಸರ್ಚ್ ಮಾಡಿದ್ದಾರೆ ಎಂಬ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ. ಹೀಗೆ ಬಿಡುಗಡೆ ಮಾಡಿದ ಪಾಕಿಸ್ತಾನದ ಗೂಗಲ್ ಟ್ರೆಂಡಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಕಾಣಿಸಿಕೊಂಡಿರುವುದು ಟೀಮ್ ಇಂಡಿಯಾ ಆಟಗಾರ ಅಭಿಷೇಕ್ ಶರ್ಮಾ ಎಂಬುದು ವಿಶೇಷ.

ಈ ವರ್ಷ ಪಾಕಿಸ್ತಾನದಲ್ಲಿ ಗೂಗಲ್‌ನಲ್ಲಿ ಹೆಚ್ಚು ಟ್ರೆಂಡಿಂಗ್ ಆದ ಆಟಗಾರರ ಪಟ್ಟಿಯಲ್ಲಿ ಭಾರತೀಯ ಬ್ಯಾಟ್ಸ್‌ಮನ್ ಅಭಿಷೇಕ್ ಶರ್ಮಾ ನಂಬರ್-1 ಸ್ಥಾನ ಪಡೆದಿದ್ದಾರೆ. ಪಾಕ್ ಆಟಗಾರರಾದ ಬಾಬರ್ ಆಝಂ, ಶಾಹೀನ್ ಶಾ ಅಫ್ರಿದಿ, ಮೊಹಮ್ಮದ್ ರಿಝ್ವಾನ್ನಂತಹ ಆಟಗಾರರನ್ನೇ ಹಿಂದಿಕ್ಕಿ ಅಭಿಷೇಕ್ ಶರ್ಮಾ ಪಾಕಿಸ್ತಾನದಲ್ಲಿ ಸಂಚಲನ ಸೃಷ್ಟಿಸಿದ್ದಾರೆ.

ಕುತೂಹಲಕಾರಿ ವಿಷಯ ಎಂದರೆ ಪಾಕಿಸ್ತಾನದ ಗೂಗಲ್ ಸರ್ಚ್ ಟ್ರೆಂಡಿಂಗ್ ಪಟ್ಟಿಯ ಟಾಪ್-10 ನಲ್ಲಿ ಅಲ್ಲಿನ ಸ್ಟಾರ್ ಆಟಗಾರರಾದ ಬಾಬರ್ ಆಝಂ, ಶಾಹೀನ್ ಶಾ ಅಫ್ರಿದಿ ಕಾಣಿಸಿಕೊಂಡಿಲ್ಲ. ಅಲ್ಲದೆ ಹೊಸ ಸೆನ್ಸೇಷನ್ ಸೃಷ್ಟಿಸಿದ್ದ ಯುವ ದಾಂಡಿಗ ಸೈಮ್ ಅಯ್ಯೂಬ್ ಆರನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಅಂದರೆ ಪಾಕಿಸ್ತಾನ್ ಆಟಗಾರರ ಬದಲಾಗಿ ಈ ವರ್ಷ ಪಾಕಿಗಳು ಅಭಿಷೇಕ್ ಶರ್ಮಾ ಬಗ್ಗೆ ಹೆಚ್ಚು ಹುಡುಕಾಡಿದ್ದಾರೆ.

ಇನ್ನು ಈ ವರ್ಷ ಭಾರತದಲ್ಲಿ ಹೆಚ್ಚು ಹುಡುಕಲ್ಪಟ್ಟ ಆಟಗಾರ 14 ವರ್ಷದ ವೈಭವ್ ಸೂರ್ಯವಂಶಿ. ಭರ್ಜರಿ ಬ್ಯಾಟಿಂಗ್ನೊಂದಿಗೆ ಅಬ್ಬರಿಸುತ್ತಿರುವ ವೈಭವ್ ಬಗ್ಗೆ ಭಾರತೀಯರು ಗೂಗಲ್‌ನಲ್ಲಿ ಹೆಚ್ಚು ಹುಡುಕಾಡಿದ್ದಾರೆ. ಅಂದರೆ ಭಾರತ ಮತ್ತು ಪಾಕಿಸ್ತಾನದಲ್ಲಿ ಟೀಮ್ ಇಂಡಿಯಾದ ಇಬ್ಬರು ಎಡಗೈ ದಾಂಡಿಗರ ಬಗ್ಗೆ ಗೂಗಲ್‌ನಲ್ಲಿ ಹೆಚ್ಚು ಹುಡುಕಾಟ ನಡೆಸಿರುವುದು ವಿಶೇಷ.