- TV9 Kannada Photo gallery Cricket photos Ajit Agarkar's Controversial Tenure as Team India Chief Selector Ends; BCCI Invites Applications
ಅಜಿತ್ ಅಗರ್ಕರ್ ಅಧಿಕಾರಾವಧಿ ಅಂತ್ಯ; ಆಯ್ಕೆಗಾರ ಹುದ್ದೆಗೆ ಅರ್ಜಿ ಆಹ್ವಾನಿಸಿದ ಬಿಸಿಸಿಐ
ಟೀಂ ಇಂಡಿಯಾದ ಮುಖ್ಯ ಆಯ್ಕೆಗಾರರಾಗಿ ಅಜಿತ್ ಅಗರ್ಕರ್ ಅವರ ಅಧಿಕಾರಾವಧಿ ಅಂತ್ಯವಾಗಿದೆ. ಬಿಸಿಸಿಐ ಹೊಸ ಮುಖ್ಯ ಆಯ್ಕೆಗಾರರ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದು, ಅಕ್ಟೋಬರ್ 14 ಕೊನೆಯ ದಿನಾಂಕವಾಗಿದೆ. ಅಗರ್ಕರ್ ಅವಧಿಯಲ್ಲಿ ತಂಡ ಉತ್ತಮ ಪ್ರದರ್ಶನ ನೀಡಿದರೂ, ಹಿರಿಯ ಆಟಗಾರರೊಂದಿಗಿನ ಸಂಬಂಧ, ನಾಯಕತ್ವ ಬದಲಾವಣೆಗಳು ಮತ್ತು ರೋಹಿತ್ ಶರ್ಮಾ ನಿವೃತ್ತಿ ವದಂತಿಗಳು ವಿವಾದಕ್ಕೆ ಕಾರಣವಾಗಿದ್ದವು. ಇದೀಗ ಹೊಸ ಆಯ್ಕೆ ಸಮಿತಿಯ ನಾಯಕತ್ವಕ್ಕಾಗಿ ಕ್ರಿಕೆಟ್ ಲೋಕ ಎದುರು ನೋಡುತ್ತಿದೆ.
Updated on:Oct 06, 2026 | 8:36 PM

ಟೀಂ ಇಂಡಿಯಾದ ಮುಖ್ಯ ಆಯ್ಕೆಗಾರರಾಗಿ ಅಜಿತ್ ಅಗರ್ಕರ್ ಅವರ ಅಧಿಕಾರಾವಧಿ ಅಧಿಕೃತವಾಗಿ ಅಂತ್ಯವಾಗಿದೆ. ಅಜಿತ್ ಅಗರ್ಕರ್ ಅವರ ಅವಧಿ ಅಕ್ಟೋಬರ್ 4, 2026 ರಂದೇ ಕೊನೆಗೊಂಡಿತ್ತು. ಹೀಗಾಗಿ ಇದೀಗ ಬಿಸಿಸಿಐ, ಅಕ್ಟೋಬರ್ 6, 2026 ರಂದು ಆಯ್ಕೆದಾರ ಹುದ್ದೆಗೆ ಹೊಸ ಅರ್ಜಿಗಳನ್ನು ಆಹ್ವಾನಿಸಿದೆ. ಹಾಗೆಯೇ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು ಅಕ್ಟೋಬರ್ 14 ಕ್ಕೆ ವಿಸ್ತರಿಸಿದೆ(PC-PTI).

ಪತ್ರಿಕಾ ಪ್ರಕಟಣೆಯಲ್ಲಿ ಬಿಸಿಸಿಐ ಈ ಬಗ್ಗೆ ಮಾಹಿತಿ ನೀಡಿದೆ. ಇದಾದ ಸ್ವಲ್ಪ ಸಮಯದ ನಂತರ, ಪ್ರಗ್ಯಾನ್ ಓಜಾ ಮತ್ತು ಆರ್‌ಪಿ ಸಿಂಗ್ ಸೇರಿದಂತೆ ಇತರ ಆಯ್ಕೆ ಸಮಿತಿ ಸದಸ್ಯರು, ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಅವರೊಂದಿಗೆ ಇರುವ ಫೋಟೋವನ್ನು ಮಂಡಳಿ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದೆ(PC-PTI).

ಈ ಸಭೆಯ ಉದ್ದೇಶವೆಂದರೆ ನ್ಯೂಜಿಲೆಂಡ್ ಪ್ರವಾಸಕ್ಕಾಗಿ ಭಾರತ ಟಿ20 ತಂಡದ ಆಯ್ಕೆಯ ಬಗ್ಗೆ ಚರ್ಚಿಸುವುದಾಗಿತ್ತು. ಇದರೊಂದಿಗೆ, ಅಜಿತ್ ಅಗರ್ಕರ್ ಅವರನ್ನು ಬಿಡುಗಡೆ ಮಾಡಲು ಮಂಡಳಿ ನಿರ್ಧರಿಸಿದೆ ಎಂದು ದೃಢಪಡಿಸಲಾಗಿದೆ. ಇದರರ್ಥ ಪ್ರಸ್ತುತ ಆಯ್ಕೆ ಸಮಿತಿಯಿಂದ ಯಾರಾದರೂ ಮುಖ್ಯ ಆಯ್ಕೆದಾರರಾಗಬಹುದು ಎಂಬುದು ಸ್ಪಷ್ಟವಾಗಿದೆ(PC-PTI).

ಅಜಿತ್ ಅಗರ್ಕರ್ ಅವರ ಅಧಿಕಾರಾವಧಿಯಲ್ಲಿ, ವೈಟ್-ಬಾಲ್ ಕ್ರಿಕೆಟ್‌ನಲ್ಲಿ ಭಾರತೀಯ ತಂಡದ ಪ್ರದರ್ಶನ ಅತ್ಯುತ್ತಮವಾಗಿತ್ತು. ಆದಾಗ್ಯೂ ಹಿರಿಯ ಆಟಗಾರರೊಂದಿಗಿನ ಅವರ ಸಂಬಂಧವು ನಿರಂತರವಾಗಿ ಚರ್ಚೆಗೆ ಗ್ರಾಸವಾಗಿತ್ತು. ಅವರ ಅಧಿಕಾರ ಅವಧಿಯಲ್ಲಿ, ಟೀಂ ಇಂಡಿಯಾ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದಿತು. ಆದರೆ ಅದಾದ ನಂತರ ರೋಹಿತ್ ಅವರನ್ನು ನಾಯಕತ್ವದಿಂದ ತೆಗೆದುಹಾಕಲಾಯಿತು. ಆ ಬಳಿಕ ಟೀಂ ಇಂಡಿಯಾ 2026 ರ ಟಿ20 ವಿಶ್ವಕಪ್ ಗೆದ್ದುಕೊಂಡಿತು. ಆದರೆ ಅದಾದ ಬಂತರ ಸೂರ್ಯಕುಮಾರ್ ಯಾದವ್ ಅವರನ್ನು ನಾಯಕತ್ವದಿಂದ ತೆಗೆದುಹಾಕಲಾಯಿತು(PC-PTI).

ಇದೆಲ್ಲದರ ಜೊತೆಗೆ ರೋಹಿತ್ ಶರ್ಮಾ ಅವರ ನಿವೃತ್ತಿಯ ಬಗ್ಗೆಯೂ ಸಾಕಷ್ಟು ಊಹಪೋಹಗಳು ಹುಟ್ಟಿಕೊಂಡವು. ರೋಹಿತ್ರನ್ನು ಏಕದಿನ ವಿಶ್ವಕಪ್ ತಂಡದಿಂದ ಕೈಬಿಡಲು ಆಯ್ಕೆ ಮಂಡಳಿ ನಿರ್ಧರಿಸಿದೆ ಎಂದು ವರದಿಯಾಗಿತ್ತು. ಆದರೆ ಈ ಎಲ್ಲಾ ವದಂತಿಗಳನ್ನು ಕಾರ್ಯದರ್ಶಿ ಸೈಕಿಯಾ ತಳ್ಳಿ ಹಾಕಿದರು. ಆದಾಗ್ಯೂ ಅಜಿತ್ ಅಗರ್ಕರ್ ಈ ವದಂತಿಯಿಂದ ಅಂತರ ಕಾಯ್ದುಕೊಂಡು ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು(PC-PTI).
Published On - 8:34 pm, Tue, 6 October 26

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್ ಪ್ರೊಡ್ಯೂಸರ್ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.
Read More



