ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಕೆಕೆಆರ್ ತಂಡದ ಸ್ಪೋಟಕ ಬ್ಯಾಟರ್ ಆ್ಯಂಡ್ರೆ ರಸೆಲ್ 2 ಭರ್ಜರಿ ಸಿಕ್ಸ್ ಸಿಡಿಸಿದ್ದರು. ಈ ಎರಡು ಸಿಕ್ಸ್ಗಳೊಂದಿಗೆ ಟಿ20 ಕ್ರಿಕೆಟ್ನಲ್ಲಿ 600 ಸಿಕ್ಸ್ಗಳನ್ನು ಪೂರೈಸಿದ್ದಾರೆ.
ವಿಶೇಷ ಎಂದರೆ ಟಿ20 ಕ್ರಿಕೆಟ್ನಲ್ಲಿ 600 ಪ್ಲಸ್ ಸಿಕ್ಸ್ಗಳನ್ನು ಸಿಡಿಸಿರುವುದು ಕೇವಲ ಮೂವರು ಬ್ಯಾಟರ್ಗಳು ಮಾತ್ರ. ಈ ಮೂವರು ವೆಸ್ಟ್ ಇಂಡೀಸ್ನ ಬ್ಯಾಟರ್ಗಳು ಎಂಬುದೇ ವಿಶೇಷ.
ಅಂದರೆ ಚುಟುಕು ಕ್ರಿಕೆಟ್ನಲ್ಲಿ ಅತ್ಯಧಿಕ ಸಿಕ್ಸ್ಗಳನ್ನು ಸಿಡಿಸಿದ ವಿಶೇಷ ವಿಶ್ವ ದಾಖಲೆ ಯುನಿವರ್ಸ್ ಬಾಸ್ ಖ್ಯಾತಿಯ ಕ್ರಿಸ್ ಗೇಲ್ ಹೆಸರಿನಲ್ಲಿದೆ. ಗೇಲ್ 455 ಟಿ20 ಇನಿಂಗ್ಸ್ಗಳಲ್ಲಿ ಒಟ್ಟು 1056 ಸಿಕ್ಸ್ಗಳನ್ನು ಬಾರಿಸಿದ್ದಾರೆ. ಈ ಮೂಲಕ ಸಾವಿರ ಸಿಕ್ಸ್ ಸಿಡಿಸಿದ ವಿಶ್ವದ ಏಕೈಕ ಆಟಗಾರ ಎನಿಸಿಕೊಂಡಿದ್ದಾರೆ.
ಇನ್ನು ದ್ವಿತೀಯ ಸ್ಥಾನದಲ್ಲಿರುವುದು ಕೀರನ್ ಪೊಲಾರ್ಡ್. 555 ಟಿ20 ಇನಿಂಗ್ಸ್ಗಳಲ್ಲಿ ಒಟ್ಟು 812 ಸಿಕ್ಸ್ಗಳನ್ನು ಬಾರಿಸುವ ಮೂಲಕ ಪೊಲಾರ್ಡ್ ಸಿಕ್ಸರ್ ಸರದಾರರ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದಾರೆ.
ಇದೀಗ 600 ಸಿಕ್ಸ್ಗಳನ್ನು ಸಿಡಿಸುವ ಮೂಲಕ ಆ್ಯಂಡ್ರೆ ರಸೆಲ್ ಈ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದ್ದಾರೆ. 384 ಟಿ20 ಇನಿಂಗ್ಸ್ಗಳಲ್ಲಿ ರಸೆಲ್ ಈ ಸಾಧನೆ ಮಾಡಿದ್ದಾರೆ. ಈ ಮೂವರನ್ನು ಹೊರತುಪಡಿಸಿ ಬೇರೆ ಯಾವುದೇ ಬ್ಯಾಟ್ಸ್ಮನ್ 500 ಸಿಕ್ಸ್ಗಳನ್ನೂ ಕೂಡ ಬಾರಿಸಿಲ್ಲ.
ಅಂದಹಾಗೆ ಅತೀ ಹೆಚ್ಚು ಸಿಕ್ಸ್ ಬಾರಿಸಿದ ಭಾರತೀಯರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವುದು ರೋಹಿತ್ ಶರ್ಮಾ. ಹಿಟ್ಮ್ಯಾನ್ 403 ಟಿ20 ಇನಿಂಗ್ಸ್ಗಳಲ್ಲಿ ಒಟ್ಟು 472 ಸಿಕ್ಸ್ಗಳನ್ನು ಬಾರಿಸಿದ್ದಾರೆ.