
IPL 2025: ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಸ್ಟಾರ್ ಆಲ್ರೌಂಡರ್ ಆ್ಯಂಡ್ರೆ ರಸೆಲ್ (Andre Russell) ಟಿ20 ಕ್ರಿಕೆಟ್ನಲ್ಲಿ ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಅದು ಕೂಡ ಒಂದೇ ಮೈದಾನದಲ್ಲಿ ಅತ್ಯಧಿಕ ಸ್ಟ್ರೈಕ್ ರೇಟ್ನೊಂದಿಗೆ 1000 ರನ್ ಪೂರೈಸುವ ಮೂಲಕ ಎಂಬುದು ವಿಶೇಷ.

ಐಪಿಎಲ್ 2025 ರ 54ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ 5ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಆ್ಯಂಡ್ರೆ ರಸೆಲ್ 25 ಎಸೆತಗಳಲ್ಲಿ 6 ಭರ್ಜರಿ ಸಿಕ್ಸ್ ಹಾಗೂ 4 ಫೋರ್ಗಳೊಂದಿಗೆ ಅಜೇಯ 57 ರನ್ ಬಾರಿಸಿದ್ದರು. ಈ ಐವತ್ತೇಳು ರನ್ಗಳೊಂದಿಗೆ ರಸೆಲ್ ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ 1000 ರನ್ ಪೂರೈಸಿದ್ದಾರೆ.

ಈ ಸಾವಿರ ರನ್ಗಳೊಂದಿಗೆ ಆ್ಯಂಡ್ರೆ ರಸೆಲ್ ಟಿ20 ಕ್ರಿಕೆಟ್ನಲ್ಲಿ ವಿಶೇಷ ದಾಖಲೆಯೊಂದನ್ನು ಸಹ ನಿರ್ಮಿಸಿದ್ದಾರೆ. ಅಂದರೆ ಒಂದೇ ಮೈದಾನದಲ್ಲಿ ಅತ್ಯಧಿಕ ಸ್ಟ್ರೈಕ್ ರೇಟ್ನೊಂದಿಗೆ ಸಾವಿರ ರನ್ ಕಲೆಹಾಕಿದ ವಿಶ್ವ ದಾಖಲೆ ರಸೆಲ್ ಪಾಲಾಗಿದೆ. ಇದಕ್ಕೂ ಮುನ್ನ ಈ ದಾಖಲೆ ಆರೋನ್ ಫಿಂಚ್ ಹೆಸರಿನಲ್ಲಿತ್ತು.

ಲಂಡನ್ನ ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ಅದ್ಭುತ ಪ್ರದರ್ಶನ ನೀಡಿರುವ ಆಸ್ಟ್ರೇಲಿಯಾದ ಆರೋನ್ ಫಿಂಚ್ 167.20 ಸ್ಟ್ರೈಕ್ ರೇಟ್ನಲ್ಲಿ 1030 ರನ್ ಕಲೆಹಾಕಿದ್ದಾರೆ. ಈ ಮೂಲಕ ಬೆಸ್ಟ್ ಸ್ಟ್ರೈಕ್ ರೇಟ್ನೊಂದಿಗೆ ಒಂದೇ ಮೈದಾನದಲ್ಲಿ ಅತ್ಯಧಿಕ ರನ್ ಕಲೆಹಾಕಿದ ಬ್ಯಾಟರ್ ಎಂಬ ದಾಖಲೆ ಬರೆದಿದ್ದರು.

ಇದೀಗ ಈ ವಿಶ್ವ ದಾಖಲೆಯನ್ನು ಮುರಿಯುವಲ್ಲಿ ಆ್ಯಂಡ್ರೆ ರಸೆಲ್ ಯಶಸ್ವಿಯಾಗಿದ್ದಾರೆ. ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ 42 ಇನಿಂಗ್ಸ್ ಆಡಿರುವ ರಸೆಲ್, 188.64ರ ಸ್ಟ್ರೈಕ್ ರೇಟ್ನಲ್ಲಿ ಈವರೆಗೆ 1047 ರನ್ ಕಲೆಹಾಕಿದ್ದಾರೆ. ಈ ಮೂಲಕ ಒಂದೇ ಮೈದಾನದಲ್ಲಿ ಅತ್ಯಧಿಕ ಸ್ಟ್ರೈಕ್ ರೇಟ್ನೊಂದಿಗೆ ಸಾವಿರ ರನ್ ಪೂರೈಸಿದ ಬ್ಯಾಟರ್ ಎಂಬ ವರ್ಲ್ಡ್ ರೆಕಾರ್ಡ್ ಅನ್ನು ಆ್ಯಂಡ್ರೆ ರಸೆಲ್ ತಮ್ಮದಾಗಿಸಿಕೊಂಡಿದ್ದಾರೆ.