
Ashes 2023 Schedule: ಟೆಸ್ಟ್ ಕ್ರಿಕೆಟ್ನ ಮದಗಜಗಳ ಕಾಳಗ ಎಂದೇ ಪ್ರಸಿದ್ಧಿ ಪಡೆದಿರುವ ಪ್ರತಿಷ್ಠಿತ ಆ್ಯಶಸ್ ಸರಣಿಗೆ ಕೌಂಟ್ ಡೌನ್ ಶುರುವಾಗಿದೆ. ಇಂಗ್ಲೆಂಡ್-ಆಸ್ಟ್ರೇಲಿಯಾ ನಡುವಣ ಈ ಟೆಸ್ಟ್ ಸರಣಿಯು ನಾಳೆಯಿಂದ ಆರಂಭವಾಗಲಿದ್ದು, ಈ ಸರಣಿಯಲ್ಲಿ ಒಟ್ಟು 5 ಪಂದ್ಯಗಳನ್ನಾಡಲಾಗುತ್ತದೆ.

1882 ರಲ್ಲಿ ಶುರುವಾದ ಈ ಟೆಸ್ಟ್ ಫೈಟ್ನಲ್ಲಿ ಇದುವರೆಗೆ 72 ಸರಣಿಗಳನ್ನು ಆಡಲಾಗಿದೆ. ಇದರಲ್ಲಿ 34 ಬಾರಿ ಆಸ್ಟ್ರೇಲಿಯಾ ತಂಡ ಗೆದ್ದರೆ, 32 ಬಾರಿ ಇಂಗ್ಲೆಂಡ್ ತಂಡ ಸರಣಿ ಜಯಿಸಿದೆ.

ವಿಶೇಷ ಎಂದರೆ ಈ 72 ಸರಣಿಗಳಲ್ಲಿ ಉಭಯ ತಂಡಗಳು ಸಮಬಲ ಸಾಧಿಸಿದ ಸರಣಿಯನ್ನು ಡ್ರಾನಲ್ಲಿ ಅಂತ್ಯಗೊಳಿಸಿದ್ದು ಕೇವಲ 6 ಬಾರಿ ಮಾತ್ರ. ಅಂದರೆ ಆ್ಯಶಸ್ ಸರಣಿಯಲ್ಲಿ ಫಲಿತಾಂಶ ಹೊರಬೀಳುವುದು ಖಚಿತ.

ಇನ್ನು ಈ ಬಾರಿಯ ಆ್ಯಶಸ್ ಸರಣಿ ನಡೆಯುತ್ತಿರುವುದು ಇಂಗ್ಲೆಂಡ್ನಲ್ಲಿ. 2019 ರಲ್ಲಿ ಇಂಗ್ಲೆಂಡ್ನಲ್ಲಿ ನಡೆದ ಸರಣಿಯನ್ನು ಆಸ್ಟ್ರೇಲಿಯಾ ಡ್ರಾ ಮಾಡಿಕೊಂಡಿತ್ತು. ಅಲ್ಲದೆ ಆಂಗ್ಲರ ನಾಡಲ್ಲಿ ಆಸೀಸ್ ಪಡೆ ಆ್ಯಶಸ್ ಸರಣಿ ಗೆದ್ದು ಬರೋಬ್ಬರಿ 26 ವರ್ಷಗಳೇ ಕಳೆದಿವೆ. ಅಂದರೆ 1997 ರಲ್ಲಿ ಕೊನೆಯ ಬಾರಿ ಇಂಗ್ಲೆಂಡ್ನಲ್ಲಿ ಆಸ್ಟ್ರೇಲಿಯಾ ಸರಣಿ ಜಯಿಸಿತ್ತು.

ಅತ್ತ ಕಳೆದ ಬಾರಿ ಕಾಂಗರೂಗಳ ನಾಡಿನಲ್ಲಿ ಇಂಗ್ಲೆಂಡ್ ತಂಡವನ್ನು 4-0 ಅಂತರದಿಂದ ಬಗ್ಗು ಬಡಿದಿರುವ ಆಸ್ಟ್ರೇಲಿಯಾ ಇದೀಗ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಗೆದ್ದ ಹುಮ್ಮಸ್ಸಿನಲ್ಲಿದೆ.

ಮತ್ತೊಂದೆಡೆ ಇಂಗ್ಲೆಂಡ್ ತಂಡವು ಕಳೆದ ಬಾರಿಯ ಹೀನಾಯ ಸೋಲಿಗೆ ಸೇಡು ತೀರಿಸಿಕೊಳ್ಳುವ ತವಕದಲ್ಲಿದೆ. ಹೀಗಾಗಿ ಈ ಬಾರಿ ಕೂಡ ಉಭಯ ತಂಡಗಳಿಂದ ಜಿದ್ದಾಜಿದ್ದಿನ ಪೈಪೋಟಿಯನ್ನು ನಿರೀಕ್ಷಿಸಬಹುದು.

ಇನ್ನು ಈ ಬಾರಿಯ ಆಶ್ಯಸ್ ಸರಣಿಯ ನೇರ ಪ್ರಸಾರವನ್ನು ಭಾರತದಲ್ಲಿ ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ವೀಕ್ಷಿಸಬಹುದು. ಹಾಗೆಯೇ ಪಂದ್ಯಗಳ ಲೈವ್ ಸ್ಟ್ರೀಮಿಂಗ್ ಲೈವ್ ಸ್ಟ್ರೀಮಿಂಗ್ SonyLIV ಮತ್ತು JioTV ಆ್ಯಪ್ಗಳಲ್ಲಿ ಇರಲಿದೆ. ಈ ಸರಣಿಯ ಸಂಪೂರ್ಣ ವೇಳಾಪಟ್ಟಿ ಈ ಕೆಳಗಿನಂತಿದೆ.

ಮೊದಲ ಟೆಸ್ಟ್ ಪಂದ್ಯ-ಎಡ್ಜ್ಬಾಸ್ಟನ್ ಸ್ಟೇಡಿಯಂ(ಜೂ. 16 ರಿಂದ ಜೂ. 20), ಎರಡನೇ ಟೆಸ್ಟ್ ಪಂದ್ಯ- ಲಾರ್ಡ್ಸ್ ಸ್ಟೇಡಿಯಂ (ಜೂ. 28 ರಿಂದ ಜುಲೈ 2), ಮೂರನೇ ಟೆಸ್ಟ್ ಪಂದ್ಯ- ಹೆಂಡಿಗ್ಲಿ ಸ್ಟೇಡಿಯಂ (ಜುಲೈ 6 ರಿಂದ ಜುಲೈ 10).

ನಾಲ್ಕನೇ ಟೆಸ್ಟ್ ಪಂದ್ಯ- ಓಲ್ಡ್ ಟ್ರಾಫರ್ಡ್ ಸ್ಟೇಡಿಯಂ (ಜುಲೈ 19 ರಿಂದ ಜುಲೈ 23), ಐದನೇ ಟೆಸ್ಟ್ ಪಂದ್ಯ- ಓವಲ್ ಸ್ಟೇಡಿಯಂ (ಜುಲೈ 27 ರಿಂದ ಜುಲೈ 31). ಈ ಎಲ್ಲಾ ಪಂದ್ಯಗಳು ಭಾರತೀಯ ಕಾಲಮಾನ ಮಧ್ಯಾಹ್ನ 3.30 ರಿಂದ ಶುರುವಾಗಲಿದೆ.