Updated on: Jun 21, 2023 | 3:59 PM
Ashes 2023: ಒಂದೇ ಟೆಸ್ಟ್ ಪಂದ್ಯದ ಐದು ದಿನದಾಟದಲ್ಲೂ ಬ್ಯಾಟ್ ಮಾಡಲು ಸಾಧ್ಯವೇ?...ಸಾಧ್ಯ ಎಂದು ಸಾಧಿಸಿ ತೋರಿಸಿಕೊಟ್ಟವರ ಪಟ್ಟಿಗೆ ಹೊಸ ಸೇರ್ಪಡೆ ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಉಸ್ಮಾನ್ ಖ್ವಾಜಾ (Usman Khawaja).
ಬರ್ಮಿಂಗ್ಹ್ಯಾಮ್ನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡವು ಮೊದಲು ಬ್ಯಾಟಿಂಗ್ ಮಾಡಿತು. ಅದರಂತೆ 8 ವಿಕೆಟ್ ನಷ್ಟಕ್ಕೆ 393 ರನ್ ಕಲೆಹಾಕಿ ಇಂಗ್ಲೆಂಡ್ ಮೊದಲೇ ದಿನವೇ ಡಿಕ್ಲೇರ್ ಘೋಷಿಸಿತು. ಅಲ್ಲದೆ ಆಸ್ಟ್ರೇಲಿಯಾ ತಂಡವು ಮೊದಲ ದಿನವೇ ತನ್ನ ಇನಿಂಗ್ಸ್ ಆರಂಭಿಸಿತ್ತು.
ಅದರಂತೆ ಮೊದಲ ದಿನ ಆರಂಭಿಕನಾಗಿ ಕಣಕ್ಕಿಳಿದ ಉಸ್ಮಾನ್ ಖ್ವಾಜಾ 2ನೇ ದಿನದಾಟದ ಅಂತ್ಯದವರೆಗೆ ಬ್ಯಾಟಿಂಗ್ ಕಾಯ್ದುಕೊಂಡಿದ್ದರು. ಅಲ್ಲದೆ 141 ರನ್ಗಳಿಸಿ ಮೂರನೇ ದಿನದಾಟದಲ್ಲಿ ವಿಕೆಟ್ ಒಪ್ಪಿಸಿದ್ದರು.
ಇನ್ನು ಮೂರನೇ ದಿನದಾಟದ ಅಂತ್ಯದಲ್ಲಿ ದ್ವಿತೀಯ ಇನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ತಂಡವು ನಾಲ್ಕನೇ ದಿನದಾಟದಲ್ಲಿ 273 ರನ್ಗಳಿಸಿ ಆಲೌಟ್ ಆಯಿತು. ಇತ್ತ ಆಸ್ಟ್ರೇಲಿಯಾ ಪರ ಉಸ್ಮಾನ್ ಖ್ವಾಜಾ ನಾಲ್ಕನೇ ದಿನದಾಟದಲ್ಲಿ ಆರಂಭಿಕರಾಗಿ ಕಣಕ್ಕಿಳಿದರು.
ಅಲ್ಲದೆ ಐದನೇ ದಿನದಾಟದಲ್ಲೂ ಬ್ಯಾಟಿಂಗ್ ಮುಂದುವರೆಸಿ 65 ರನ್ಗಳಿಸಿ ಔಟಾದರು. ಇದರೊಂದಿಗೆ ಟೆಸ್ಟ್ ಕ್ರಿಕೆಟ್ನಲ್ಲಿ ಐದು ದಿನದಾಟದಲ್ಲೂ ಬ್ಯಾಟಿಂಗ್ ಮಾಡಿದ ವಿಶ್ವದ 13ನೇ ಆಟಗಾರ ಎಂಬ ವಿಶೇಷ ದಾಖಲೆ ಉಸ್ಮಾನ್ ಖ್ವಾಜಾ ಪಾಲಾಯಿತು.
ಇದಕ್ಕೂ ಮುನ್ನ ಮೋಟ್ಗನಳ್ಳಿ ಜೈಸಿಂಹ (ಭಾರತ), ಜೆಫ್ರಿ ಬಾಯ್ಕಾಟ್ (ಇಂಗ್ಲೆಂಡ್), ಕಿಮ್ ಹ್ಯೂಸ್ (ಆಸ್ಟ್ರೇಲಿಯಾ), ಅಲನ್ ಲ್ಯಾಂಬ್ (ಇಂಗ್ಲೆಂಡ್), ರವಿಶಾಸ್ತ್ರಿ (ಭಾರತ), ಆಡ್ರಿಯನ್ ಗ್ರಿಫಿತ್ (ವೆಸ್ಟ್ ಇಂಡೀಸ್), ಆಂಡ್ರ್ಯೂ ಫ್ಲಿಂಟಾಫ್ (ಇಂಗ್ಲೆಂಡ್), ಅಲ್ವಿರೋ ಪೀಟರ್ಸನ್ (ದಕ್ಷಿಣ ಆಫ್ರಿಕಾ), ಚೇತೇಶ್ವರ ಪೂಜಾರ (ಭಾರತ), ರೋರಿ ಬರ್ನ್ಸ್ (ಇಂಗ್ಲೆಂಡ್), ಕ್ರೈಗ್ ಬ್ರಾಥ್‌ವೈಟ್ (ವೆಸ್ಟ್ ಇಂಡೀಸ್), ತೇಜ್ನರೈನ್ ಚಂದ್ರಪಾಲ್ (ವೆಸ್ಟ್ ಇಂಡೀಸ್) ಈ ಸಾಧನೆ ಮಾಡಿದ್ದರು.
ಇದೀಗ ಇಂಗ್ಲೆಂಡ್ ವಿರುದ್ಧ 5 ದಿನದಾಟದಲ್ಲೂ ಬ್ಯಾಟ್ ಬೀಸಿ ಒಟ್ಟು 518 ಎಸೆತಗಳಲ್ಲಿ 206 ರನ್ಗಳಿಸುವ ಮೂಲಕ ಉಸ್ಮಾನ್ ಖ್ವಾಜಾ ವಿಶೇಷ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.
Published On - 3:58 pm, Wed, 21 June 23