
ಟಿ20 ವಿಶ್ವಕಪ್‌ಗೂ ಮುನ್ನ ಏಷ್ಯಾದ ಪ್ರಮುಖ ತಂಡಗಳು ಚುಟುಕು ಕ್ರಿಕೆಟ್ ಕದನಕ್ಕಾಗಿ ಯುಎಇಗೆ ಆಗಮಿಸಿದೆ. ಅದರಂತೆ ಆಗಸ್ಟ್ 27 ರಿಂದ ಏಷ್ಯಾಕಪ್ ಶುರುವಾಗಲಿದೆ. ವಿಶೇಷ ಎಂದರೆ ಈ ಬಾರಿ ನಡೆಯುತ್ತಿರುವ 15ನೇ ಸೀಸನ್ ಏಷ್ಯಾಕಪ್. ಈ ಟೂರ್ನಿಯ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿದೆ.

ಏಷ್ಯಾಕಪ್ ಮೊದಲ ಬಾರಿಗೆ 1984 ರಲ್ಲಿ ನಡೆಯಿತು. ಅಂದಿನಿಂದ ಈ ಟೂರ್ನಿಯನ್ನು ಎರಡು ವರ್ಷಗಳಿಗೊಮ್ಮೆ ಆಯೋಜಿಸಲಾಗುತ್ತಿದೆ. ಅದರಂತೆ ಇದೀಗ 15ನೇ ಸೀಸನ್ ಏಷ್ಯಾಕಪ್ಗಾಗಿ ಯುಎಇನ ದುಬೈ ಹಾಗೂ ಶಾರ್ಜಾ ಸ್ಟೇಡಿಯಂಗಳು ಸಜ್ಜಾಗಿ ನಿಂತಿದೆ.

ಏಷ್ಯಾಕಪ್‌ನಲ್ಲಿ ಭಾರತ ಅತ್ಯಂತ ಯಶಸ್ವಿ ತಂಡವಾಗಿದೆ. ಅಂದರೆ ಕಳೆದ 14 ಸೀಸನ್ನಲ್ಲಿ ಏಳು ಬಾರಿ ಭಾರತ ಚಾಂಪಿಯನ್ ಆಗಿದೆ. ಮೊದಲ ಏಷ್ಯಾಕಪ್ ಗೆದ್ದ ತಂಡ ದಾಖಲೆ ಕೂಡ ಭಾರತದ ಹೆಸರಿನಲ್ಲಿದೆ. ಹಾಗೆಯೇ ಹಾಲಿ ಚಾಂಪಿಯನ್ ಆಗಿ ಟೀಮ್ ಇಂಡಿಯಾ ಕಣಕ್ಕಿಳಿಯಲಿದೆ. ಇನ್ನು ಭಾರತವನ್ನು ಹೊರತುಪಡಿಸಿ ಶ್ರೀಲಂಕಾ 5 ಬಾರಿ, ಪಾಕಿಸ್ತಾನ್ 2 ಬಾರಿ ಚಾಂಪಿಯನ್ ಆಗಿದೆ.

ಈ ಬಾರಿಯ ಏಷ್ಯಾಕಪ್‌ನಲ್ಲಿ ಒಟ್ಟು 6 ತಂಡಗಳು ಕಣಕ್ಕಿಳಿಯಲಿದೆ. ಈಗಾಗಲೇ ಭಾರತ, ಪಾಕಿಸ್ತಾನ್, ಅಫ್ಘಾನಿಸ್ತಾನ್, ಶ್ರೀಲಂಕಾ, ಬಾಂಗ್ಲಾದೇಶ್ ತಂಡಗಳು ಅರ್ಹತೆ ಪಡೆದುಕೊಂಡಿದೆ. ಇನ್ನು ಆಗಸ್ಟ್ 20 ರಿಂದ 24 ರವರೆಗೆ ಅರ್ಹತಾ ಸುತ್ತಿನ ಪಂದ್ಯ ನಡೆಯಲಿದ್ದು, ಇದರಲ್ಲಿ ಯುಎಇ, ಹಾಂಗ್ ಕಾಂಗ್, ಸಿಂಗಾಪುರ ಮತ್ತು ಕುವೈತ್‌ಗಳು ಕಣಕ್ಕಳಿದಿವೆ. ಇದರಲ್ಲಿ ಒಂದು ತಂಡವು ಏಷ್ಯಾಕಪ್ಗೆ ಅರ್ಹತೆ ಪಡೆಯಲಿದೆ.

ಈ ಬಾರಿಯ ಏಷ್ಯಾಕಪ್ ರೌಂಡ್ ರಾಬಿನ್ ಮಾದರಿಯಲ್ಲಿ ನಡೆಯಲಿದೆ. ಅಂದರೆ ಮೊದಲು ಗ್ರೂಪ್ ಸುತ್ತಿನ ಪಂದ್ಯಗಳು ನಡೆಯಲಿದ್ದು, ಇದಾದ ಬಳಿಕ ಸೂಪರ್-4 ತಂಡಗಳು ಸೆಣಸಲಿದೆ. ಇಲ್ಲಿ ಪ್ರತಿ ಗ್ರೂಪ್ನಲ್ಲಿ 3 ತಂಡಗಳಿವೆ. ಈ ಮೂರು ತಂಡಗಳಲ್ಲಿ ಟಾಪ್ 2 ತಂಡಗಳು ಸೂಪರ್-4 ಗೆ ಅರ್ಹತೆ ಪಡೆಯಲಿದೆ. ಸೂಪರ್ 4 ಅನ್ನು ರಾಬಿನ್ ರೌಂಡ್‌ನಲ್ಲಿ ಆಡಲಾಗುತ್ತದೆ, ಅಲ್ಲಿ ಎಲ್ಲಾ ತಂಡಗಳು ಪರಸ್ಪರ ಮುಖಾಮುಖಿಯಾಗುತ್ತವೆ. ಹಾಗೆಯೇ ಮೊದಲ ಮತ್ತು 2ನೇ ಸ್ಥಾನ ಪಡೆಯುವ ತಂಡಗಳು ಫೈನಲ್ ಆಡಲಿದೆ.

ರೌಂಡ್ ರಾಬಿನ್ ಮಾದರಿಯಲ್ಲಿ ಟೂರ್ನಿ ನಡೆಯುವುದರಿಂದ ಭಾರತ ಮತ್ತು ಪಾಕಿಸ್ತಾನ ತಂಡಗಳು ಮೂರು ಬಾರಿ ಮುಖಾಮುಖಿಯಾಗಬಹುದು. ಮೊದಲು ಗ್ರೂಪ್ ಸುತ್ತಿನಲ್ಲಿ ಸೆಣಸಿದರೆ, ಆ ಬಳಿಕ ಸೂಪರ್ 4 ನಲ್ಲಿ ಆಡಲಿದೆ. ಇದಾದ ಬಳಿಕ ಫೈನಲ್ನಲ್ಲೂ ಮುಖಾಮುಖಿಯಾಗುವ ಸಾಧ್ಯತೆಯಿದೆ.

ಈಗ ಏಷ್ಯಾಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ 14 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಈ ವೇಳೆ ಭಾರತ ತಂಡ 8 ಬಾರಿ ಗೆದ್ದಿದ್ದರೆ, ಪಾಕಿಸ್ತಾನ ಐದು ಪಂದ್ಯಗಳನ್ನು ಗೆದ್ದಿದೆ. ಒಂದು ಪಂದ್ಯ ರದ್ದಾಗಿತ್ತು.

ಏಷ್ಯಾಕಪ್ ಟಿ20 ಮಾದರಿಯಲ್ಲಿ ನಡೆಯುತ್ತಿರುವುದು ಇದು ಎರಡನೇ ಬಾರಿ. 2016 ರಲ್ಲಿ ಟಿ20 ವಿಶ್ವಕಪ್ ದೃಷ್ಟಿಯಿಂದ, ಈ ಟೂರ್ನಿಯನ್ನು ಟಿ20 ಸ್ವರೂಪದಲ್ಲಿ ಆಡಿಸಲಾಯಿತು. ಇದೀಗ ಅದೇ ಮಾದರಿಯನ್ನು ಮುಂದುವರೆಸಲಾಗಿದೆ.

ಏಷ್ಯಾಕಪ್ ಆಗಸ್ಟ್ 27 ರಿಂದ ಶುರುವಾಗಲಿದ್ದು, ಮೊದಲ ಪಂದ್ಯದಲ್ಲಿ ಶ್ರೀಲಂಕಾ - ಅಫ್ಘಾನಿಸ್ತಾನ್ ತಂಡಗಳು ಮುಖಾಮುಖಿಯಾಗಲಿದೆ. ಆಗಸ್ಟ್ 28 ರಂದು ಪಾಕಿಸ್ತಾನ್ ವಿರುದ್ದದ ಪಂದ್ಯದ ಮೂಲಕ ಟೀಮ್ ಇಂಡಿಯಾ ಅಭಿಯಾನ ಆರಂಭಿಸಲಿದೆ. ಇನ್ನು ಫೈನಲ್ ಪಂದ್ಯವು ಸೆಪ್ಟೆಂಬರ್ 11 ರಂದು ನಡೆಯಲಿದೆ.