
ಏಷ್ಯಾಕಪ್ ಸೂಪರ್ 4 ಸುತ್ತಿನಲ್ಲಿ ಇದೇ ಸೆಪ್ಟೆಂಬರ್ 24 ರಂದು ಭಾರತ ಮತ್ತು ಬಾಂಗ್ಲಾದೇಶ ಮುಖಾಮುಖಿಯಾಗಲಿವೆ. ಈ ಪಂದ್ಯ ಎರಡೂ ತಂಡಗಳಿಗೆ ನಿರ್ಣಾಯಕವಾಗಿದೆ. ಏಕೆಂದರೆ ಈ ಪಂದ್ಯದ ವಿಜೇತರು ಫೈನಲ್‌ಗೆ ಟಿಕೆಟ್ಮಪಡೆಯಲಿದ್ದಾರೆ. ಹೀಗಾಗಿ ಉಭಯ ತಂಡಗಳು ನೆಟ್ಸ್ನಲ್ಲಿ ಸಾಕಷ್ಟು ಬೆವರು ಹರಿಸುತ್ತಿವೆ.

ಆದಾಗ್ಯೂ, ಈ ಪಂದ್ಯಕ್ಕೂ ಮುನ್ನ ಬಾಂಗ್ಲಾದೇಶ ತಂಡವು ದೊಡ್ಡ ಹಿನ್ನಡೆಯನ್ನು ಅನುಭವಿಸಿದೆ. ತಂಡದ ನಾಯಕ ಲಿಟ್ಟನ್ ದಾಸ್ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಐಸಿಸಿ ಅಕಾಡೆಮಿ ಮೈದಾನದಲ್ಲಿ ಅಭ್ಯಾಸದ ಸಮಯದಲ್ಲಿ ಅವರು ಬೆನ್ನುನೋವಿಗೆ ಒಳಗಾಗಿದ್ದಾರೆ. ಬ್ಯಾಟಿಂಗ್ ಅಭ್ಯಾಸದ ಸಮಯದಲ್ಲಿ ದಾಸ್ ಬೆನ್ನಿನ ಸ್ನಾಯು ಸೆಳೆತಕ್ಕೆ ಒಳಗಾಗಿದ್ದು, ಅಭ್ಯಾಸವನ್ನು ಅರ್ಧಕ್ಕೆ ನಿಲ್ಲಿಸಿದ್ದಾರೆ.

ಲಿಟ್ಟನ್ ದಾಸ್ ಅವರ ಗಾಯದ ತೀವ್ರತೆ ಇನ್ನೂ ತಿಳಿದುಬಂದಿಲ್ಲ, ಆದರೆ ಸ್ಕ್ವೇರ್-ಕಟ್ ಶಾಟ್ ಆಡುವಾಗ ಅವರ ಎಡ ತೊಡೆಸಂದು ನೋವು ಕಾಣಿಸಿಕೊಂಡಿದ್ದು, ನಂತರ ತಂಡದ ಫಿಸಿಯೋ ಬಯಾಜಿದ್ ಉಲ್ ಇಸ್ಲಾಂ ಚಿಕಿತ್ಸೆ ನೀಡಿದ್ದಾರೆ ಎಂದು ವರದಿಯಾಗಿದೆ.

ಸಧ್ಯ ಇಂಜುರಿಗೊಂಡಿರುವ ಲಿಟ್ಟನ್ ದಾಸ್ ಭಾರತದ ವಿರುದ್ಧದ ಪಂದ್ಯದಲ್ಲಿ ಆಡಲು ಸಾಧ್ಯವಾಗುತ್ತದೆಯೇ ಎಂಬುದು ಪಂದ್ಯದ ದಿನ ತಿಳಿಯಲಿದೆ. ಲಿಟ್ಟನ್ ದಾಸ್ ಅವರನ್ನು ಮೇಲ್ವೀಚಾರಣೆ ನಡೆಸಲಾಗುತ್ತಿದೆ ಬಿಸಿಬಿ ಅಧಿಕಾರಿಯೊಬ್ಬರು ಕ್ರಿಕ್‌ಬಜ್‌ಗೆ ತಿಳಿಸಿದ್ದಾರೆ. ಮೇಲ್ನೋಟಕ್ಕೆ ಅವರು ಚೆನ್ನಾಗಿ ಕಾಣುತ್ತಿದ್ದಾರೆಯಾದರೂ ಅವರ ಗಾಯದ ವ್ಯಾಪ್ತಿಯನ್ನು ವೈದ್ಯಕೀಯ ಪರೀಕ್ಷೆಯ ನಂತರವೇ ನಿರ್ಧರಿಸಲಾಗುವುದು ಎಂದಿದ್ದಾರೆ.

ಪ್ರಸ್ತುತ ಏಷ್ಯಾ ಕಪ್‌ನಲ್ಲಿ ಲಿಟ್ಟನ್ ದಾಸ್ 29.75 ಸರಾಸರಿಯಲ್ಲಿ 119 ರನ್ ಗಳಿಸಿದ್ದಾರೆ. ಅಲ್ಲದೆ ಅವರು ನಾಯಕ ಮತ್ತು ವಿಕೆಟ್ ಕೀಪರ್ ಎರಡೂ ಆಗಿದ್ದಾರೆ. ಲಿಟ್ಟನ್ ಆಡದಿದ್ದರೆ, ಅವರ ಸ್ಥಾನದಲ್ಲಿ ತಂಡವನ್ನು ಯಾರು ಮುನ್ನಡೆಸುತ್ತಾರೆ ಎಂಬ ಪ್ರಶ್ನೆ ಬಾಂಗ್ಲಾದೇಶಕ್ಕೆ ಪ್ರಮುಖ ಕಳವಳಕಾರಿಯಾಗಿದೆ. ಈ ಕಾಳಜಿ ವಿಶೇಷವಾಗಿ ಮಹತ್ವದ್ದಾಗಿದೆ. ಏಕೆಂದರೆ ಅವರು ಈ ಏಷ್ಯಾಕಪ್‌ನಲ್ಲಿ ಒಂದೇ ಒಂದು ಪಂದ್ಯವನ್ನು ಸೋತಿಲ್ಲದ ಟೂರ್ನಮೆಂಟ್‌ನ ಅತ್ಯುತ್ತಮ ತಂಡವಾದ ಭಾರತವನ್ನು ಎದುರಿಸುತ್ತಿದ್ದಾರೆ.