
ರಣಜಿ ಟೂರ್ನಿಯಲ್ಲಿ ಕೇವಲ 5 ರನ್ ನೀಡಿ 5 ವಿಕೆಟ್ ಉರುಳಿಸಿ ಜಮ್ಮು-ಕಾಶ್ಮೀರ್ ವೇಗಿ ಆಖಿಬ್ ನಬಿ (Auqib nabi) ಸಂಚಲನ ಸೃಷ್ಟಿಸಿದ್ದಾರೆ. ಅದು ಸಹ ಅರ್ಧಶತಕ ಬಾರಿಸಿದ ಬೆನ್ನಲ್ಲೇ ಎಂಬುದು ಮತ್ತೊಂದು ವಿಶೇಷ. ಅಂದರೆ ಹಾಫ್ ಸೆಂಚುರಿ ಸಿಡಿಸಿದ ಬೆನ್ನಲ್ಲೇ ಆಖಿಬ್ ಐದು ವಿಕೆಟ್ಗಳನ್ನು ಸಹ ಕಬಳಿಸಿದ್ದಾರೆ.

ಶ್ರೀನಗರದ ಶೇರ್ ಐ ಕಾಶ್ಮೀರ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ರಾಜಸ್ಥಾನ್ ವಿರುದ್ಧ ಟಾಸ್ ಗೆದ್ದ ಜಮ್ಮು ಕಾಶ್ಮೀರ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ ತಂಡವು ಕೇವಲ 152 ರನ್ ಗಳಿಗೆ ಆಲೌಟ್ ಆಗಿತ್ತು. ಜಮ್ಮು ಕಾಶ್ಮೀರ ಪರ ಆಖಿಬ್ ನಬಿ 29 ರನ್ ನೀಡಿ 3 ವಿಕೆಟ್ ಪಡೆದರೆ, ಸುನಿಲ್ ಕುಮಾರ್ 32 ರನ್ ಗೆ 4 ವಿಕೆಟ್ ಕಬಳಿಸಿದರು.

ಆ ಬಳಿಕ ಮೊದಲ ಇನಿಂಗ್ಸ್ ಶುರು ಮಾಡಿದ ಜಮ್ಮು ಕಾಶ್ಮೀರ ಪರ ಅಬ್ದುಲ್ ಸಮದ್ 76 ರನ್ ಬಾರಿಸಿದರು. ಇನ್ನು 9ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಆಖಿಬ್ ನಬಿ 65 ಎಸೆತಗಳಲ್ಲಿ 55 ರನ್ ಚಚ್ಚಿದರು. ಈ ಮೂಲಕ ಜಮ್ಮು ಕಾಶ್ಮೀರ ತಂಡವು ಮೊದಲ ಇನಿಂಗ್ಸ್ ನಲ್ಲಿ 282 ರನ್ ಗಳಿಸಿ ಆಲೌಟ್ ಆಯಿತು.

ಇದರ ಬೆನ್ನಲ್ಲೇ ದ್ವಿತೀಯ ಆರಂಭಿಸಿದ ರಾಜಸ್ಥಾನ್ ತಂಡಕ್ಕೆ ಆಖಿಬ್ ನಬಿ ಆಘಾತದ ಮೇಲೆ ಆಘಾತ ನೀಡಿದರು. ದ್ವಿತೀಯ ದಿನದಾಟದ ಅಂತ್ಯದಲ್ಲಿ 6 ಓವರ್‌ಗಳನ್ನು ಎಸೆದ ಆಖಿಬ್ ಕೇವಲ 5 ವಿಕೆಟ್ ಕಬಳಿಸಿದರು. ವಿಶೇಷ ಎಂದರೆ ಆಖಿಬ್ ನಬಿ ಕಬಳಿಸಿರುವುದು ರಾಜಸ್ಥಾನ್ ತಂಡ ಟಾಪ್-5 ಬ್ಯಾಟರ್ ಗಳ ವಿಕೆಟ್ ಗಳನ್ನು. ಅಂದರೆ ಸತತವಾಗಿ ಐವರನ್ನು ಔಟ್ ಮಾಡಿದ್ದಾರೆ.

ಈ ಮೂಲಕ ರಣಜಿ ಕ್ರಿಕೆಟ್ ಇತಿಹಾಸದಲ್ಲೇ ಅರ್ಧಶತಕ ಬಾರಿಸಿದ ಬೆನ್ನಲ್ಲೇ ಅತೀ ಕಡಿಮೆ ಅವಧಿಯಲ್ಲಿ 5 ವಿಕೆಟ್ ಕಬಳಿಸಿದ ಮೊದಲ ಬೌಲರ್ ಎನಿಸಿಕೊಂಡಿದ್ದಾರೆ. ಅಂದಹಾಗೆ ಆಖಿಬ್ ನಬಿ ಈ ವಿಶೇಷ ದಾಖಲೆ ಬರೆಯುವ ಮುನ್ನ ದುಲೀಪ್ ಟ್ರೋಫಿ ಟೂರ್ನಿಯಲ್ಲಿ ಭರ್ಜರಿ ದಾಖಲೆಯೊಂದನ್ನು ನಿರ್ಮಿಸಿದ್ದರು. ಅದು ಸಹ ಸತತ 4 ಎಸೆತಗಳಲ್ಲಿ 4 ವಿಕೆಟ್ ಕಬಳಿಸುವ ಮೂಲಕ. ಇದೀಗ ರಣಜಿ ಪಂದ್ಯದಲ್ಲಿ ಕೇವಲ 5 ರನ್ ನೀಡಿ 5 ವಿಕೆಟ್ ಉರುಳಿಸಿ ಸಂಚಲನ ಸೃಷ್ಟಿಸಿದ್ದಾರೆ.