ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಮೂರನೇ ಹಾಗೂ ಅಂತಿಮ ಸಿಡ್ನಿ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಅದ್ಭುತ ಶತಕ ಬಾರಿಸಿ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ.
ಸಿಡ್ನಿಯಲ್ಲಿ ಶತಕ ಸಿಡಿಸುವುದರೊಂದಿಗೆ ಸ್ಮಿತ್, ಸರ್. ಡಾನ್ ಬ್ರಾಡ್ಮನ್ ಅವರ ದಾಖಲೆಯನ್ನು ಮುರಿದಿದ್ದಾರೆ. ವಾಸ್ತವವಾಗಿ, ಸ್ಮಿತ್ ಟೆಸ್ಟ್‌ನಲ್ಲಿ ತಮ್ಮ 30 ನೇ ಶತಕವನ್ನು ಗಳಿಸುವುದರೊಂದಿಗೆ ಬ್ರಾಡ್‌ಮನ್ ಅವರ 29 ಶತಕಗಳ ಅಂಕಿ ಅಂಶಗಳನ್ನು ಮೀರಿಸಿದ್ದಾರೆ. ಅಲ್ಲದೆ ಆಸ್ಟ್ರೇಲಿಯಾ ಪರ ಅತಿ ಹೆಚ್ಚು ಶತಕ ಸಿಡಿಸಿದ ಆಟಗಾರರ ಪಟ್ಟಿಯಲ್ಲಿ ಸ್ಮಿತ್ ಈಗ ಸ್ಟೀವ್ ವಾ ಮತ್ತು ರಿಕಿ ಪಾಂಟಿಂಗ್‌ಗಿಂತ ಹಿಂದಿದ್ದಾರೆ. ಆಸ್ಟ್ರೇಲಿಯಾ ಪರ ಪಾಂಟಿಂಗ್ ಅತಿ ಹೆಚ್ಚು 41 ಶತಕಗಳನ್ನು ಗಳಿಸಿದ್ದರೆ, ಸ್ಟೀವ್ ವಾ 32 ಶತಕಗಳನ್ನು ಬಾರಿಸಿದ್ದಾರೆ.
ಆದರೆ 30 ಶತಕಗಳನ್ನು ವೇಗವಾಗಿ ಬಾರಿಸಿದ ವಿಷಯದಲ್ಲಿ ಸ್ಟೀವ್ ಸ್ಮಿತ್, ಸಚಿನ್ ದಾಖಲೆಯನ್ನು ಮುರಿಯಲಾಗಲಿಲ್ಲ. ಸ್ಮಿತ್ 162 ಇನ್ನಿಂಗ್ಸ್‌ಗಳಲ್ಲಿ 30 ಶತಕ ಸಿಡಿಸಿದ್ದರೆ, ಸಚಿನ್ 159 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದರು.
ಅಲ್ಲದೆ ಸ್ಟೀವ್ ಸ್ಮಿತ್ ಆಸ್ಟ್ರೇಲಿಯಾ ಪರ ಅತಿ ಹೆಚ್ಚು ಟೆಸ್ಟ್ ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಈಗ ನಾಲ್ಕನೇ ಸ್ಥಾನದಲ್ಲಿದ್ದಾರೆ. ಈ ಶತಕದ ಇನ್ನಿಂಗ್ಸ್ ಜೊತೆಗೆ ಸ್ಮಿತ್, ಮ್ಯಾಥ್ಯೂ ಹೇಡನ್ ಮತ್ತು ಮೈಕೆಲ್ ಕ್ಲಾರ್ಕ್ ಅವರನ್ನು ಹಿಂದಿಕ್ಕಿದರು.
ಪ್ರಸ್ತುತ ಆಟಗಾರರ ಪೈಕಿ 30 ಶತಕಗಳನ್ನು ಗಳಿಸಿದ ಏಕೈಕ ಆಟಗಾರ ಸ್ಟೀವ್ ಸ್ಮಿತ್. ಇದುವರೆಗೆ ಜೋ ರೂಟ್ 28, ವಿರಾಟ್ ಕೊಹ್ಲಿ ಕೇವಲ 27 ಶತಕ ಗಳಿಸಲು ಶಕ್ತರಾಗಿದ್ದಾರೆ. ಸ್ಮಿತ್ ಇದುವರೆಗೆ 100 ಟೆಸ್ಟ್ ಪಂದ್ಯಗಳನ್ನು ಆಡಿಲ್ಲ ಎಂಬುದು ದೊಡ್ಡ ವಿಷಯ. ರೂಟ್ ಮತ್ತು ವಿರಾಟ್ ಇಬ್ಬರೂ 100 ಕ್ಕೂ ಹೆಚ್ಚು ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ.