
ವೆಸ್ಟ್ ಇಂಡೀಸ್ ವಿರುದ್ಧದ 5ನೇ ಟಿ20 ಪಂದ್ಯದಲ್ಲೂ ಆಸ್ಟ್ರೇಲಿಯಾ ತಂಡ ಜಯಭೇರಿ ಬಾರಿಸಿದೆ. ಸೇಂಟ್ ಕಿಟ್ಸ್ನ ವಾರ್ನರ್ ಪಾರ್ಕ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕ ಮಿಚೆಲ್ ಮಾರ್ಷ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ ತಂಡವು ನಿರೀಕ್ಷಿತ ಆರಂಭ ಪಡೆದಿರಲಿಲ್ಲ.

ಇದಾಗ್ಯೂ ಮಧ್ಯಮ ಕ್ರಮಾಂಕದಲ್ಲಿ ಶೆರ್ಫೆನ್ ರದರ್ಫೋರ್ಡ್ 35 ರನ್ ಬಾರಿಸಿ ತಂಡಕ್ಕೆ ಆಸರೆಯಾದರು. ಇನ್ನು ಶಿಮ್ರಾನ್ ಹೆಟ್ಮೆಯರ್ 31 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 3 ಫೋರ್ಗಳೊಂದಿಗೆ 52 ರನ್ ಚಚ್ಚಿದರು. ಈ ಅರ್ಧಶತಕದ ನೆರವಿನೊಂದಿಗೆ ವೆಸ್ಟ್ ಇಂಡೀಸ್ ತಂಡವು 19.4 ಓವರ್ಗಳಲ್ಲಿ 170 ರನ್ಗಳಿಸಿ ಆಲೌಟ್ ಆಯಿತು.

171 ರನ್ಗಳ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ತಂಡ ಉತ್ತಮ ಆರಂಭ ಪಡೆಯುವಲ್ಲಿ ವಿಫಲವಾಯಿತು. ಆರಂಭಿಕನಾಗಿ ಕಣಕ್ಕಿಳಿದ ಗ್ಲೆನ್ ಮ್ಯಾಕ್ಸ್ವೆಲ್ ಶೂನ್ಯಕ್ಕೆ ಔಟಾದರೆ, ಜೋಶ್ ಇಂಗ್ಲಿಸ್ 10 ರನ್ಗಳಿಸಿ ವಿಕೆಟ್ ಒಪ್ಪಿಸಿದರು. ಇನ್ನು ನಾಯಕ ಮಿಚೆಲ್ ಮಾರ್ಷ್ 14 ರನ್ಗಳಿಸಿ ಇನಿಂಗ್ಸ್ ಅಂತ್ಯಗೊಳಿಸಿದ್ದರು.

ಈ ಹಂತದಲ್ಲಿ ಜೊತೆಗೂಡಿದ ಕ್ಯಾಮರೋನ್ ಗ್ರೀನ್ ಹಾಗೂ ಟಿಮ್ ಡೇವಿಡ್ ಸ್ಫೋಟಕ ಇನಿಂಗ್ಸ್ ಆಡಿದರು. ಪರಿಣಾಮ ಗ್ರೀನ್ ಬ್ಯಾಟ್ನಿಂದ 18 ಎಸೆತಗಳಲ್ಲಿ 32 ರನ್ ಮೂಡಿಬಂತು. ಅತ್ತ ಟಿಮ್ ಡೇವಿಡ್ 12 ಎಸೆತಗಳಲ್ಲಿ 4 ಸಿಕ್ಸ್, 1 ಫೋರ್ನೊಂದಿಗೆ 30 ರನ್ ಚಚ್ಚಿದರು. ಆ ಬಳಿಕ ಬಂದ ಮಿಚೆಲ್ ಓವನ್ 17 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 3 ಫೋರ್ಗಳೊಂದಿಗೆ 37 ರನ್ ಬಾರಿಸಿದರು.

ಈ ಮೂಲಕ ಆಸ್ಟ್ರೇಲಿಯಾ ತಂಡವು 17 ಓವರ್ಗಳಲ್ಲಿ 173 ರನ್ಗಳಿಸಿ 3 ವಿಕೆಟ್ಗಳ ರೋಚಕ ಜಯ ಸಾಧಿಸಿತು. ಈ ಗೆಲುವಿನೊಂದಿಗೆ ಆಸ್ಟ್ರೇಲಿಯಾ ತಂಡವು ಇದೇ ಮೊದಲ ಬಾರಿಗೆ 5-0 ಅಂತರದಿಂದ ಟಿ20 ಸರಣಿ ಗೆದ್ದ ದಾಖಲೆ ಬರೆದಿದೆ. ಅಂದರೆ ಈವರೆಗೆ ಆಸೀಸ್ ಪಡೆ ಯಾವುದೇ ತಂಡದ ವಿರುದ್ಧ 5-0 ಅಂತರದಿಂದ ಟಿ20 ಸರಣಿ ಗೆದ್ದಿರಲಿಲ್ಲ. ಇದೀಗ ವೆಸ್ಟ್ ಇಂಡೀಸ್ ತಂಡವನ್ನು ವೈಟ್ ವಾಶ್ ಮಾಡುವ ಮೂಲಕ ಆಸ್ಟ್ರೇಲಿಯಾ ಹೊಸ ಇತಿಹಾಸ ನಿರ್ಮಿಸಿದೆ.