ಆಸ್ಟ್ರೇಲಿಯಾ ಪಡೆಯ ಗರ್ವಭಂಗ: 34 ವರ್ಷಗಳ ಬಳಿಕ ಅತ್ಯಂತ ಹೀನಾಯ ಸೋಲು
Australia vs South Africa: ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಮ್ಯಾಚ್ನಲ್ಲಿ ಸೌತ್ ಆಫ್ರಿಕಾ ತಂಡ ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸೌತ್ ಆಫ್ರಿಕಾ 50 ಓವರ್ಗಳಲ್ಲಿ 296 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಆಸ್ಟ್ರೇಲಿಯಾ ತಂಡವು ಕೇವಲ 198 ರನ್ಗಳಿಗೆ ಆಲೌಟ್ ಆಗಿದೆ.
Updated on: Aug 20, 2025 | 10:25 AM

ಸೌತ್ ಆಫ್ರಿಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಹೀನಾಯ ಸೋಲನುಭವಿಸಿದೆ. ಕೈರ್ನ್ಸ್ನ ಕಝಲಿ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕ ಮಿಚೆಲ್ ಮಾರ್ಷ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಸೌತ್ ಆಫ್ರಿಕಾ ತಂಡಕ್ಕೆ ಐಡೆನ್ ಮಾರ್ಕ್ರಾಮ್ ಹಾಗೂ ರಯಾನ್ ರಿಕೆಲ್ಟನ್ ಭರ್ಜರಿ ಆರಂಭ ಒದಗಿಸಿದ್ದರು.

ಮೊದಲ ವಿಕೆಟ್ಗೆ 92 ರನ್ಗಳ ಜೊತೆಯಾಟವಾಡಿದ ಬಳಿಕ ರಯಾನ್ ರಿಕೆಲ್ಟನ್ 33 ಔಟಾದರು. ಮತ್ತೊಂದೆಡೆ ಉತ್ತಮ ಬ್ಯಾಟಿಂಗ್ ಮುಂದುವರೆಸಿದ ಐಡೆನ್ ಮಾರ್ಕ್ರಾಮ್ 81 ಎಸೆತಗಳಲ್ಲಿ 9 ಫೋರ್ಗಳೊಂದಿಗೆ 82 ರನ್ ಬಾರಿಸಿದರು. ಆ ಬಳಿಕ ಬಂದ ಟೆಂಬಾ ಬವುಮಾ 65 ರನ್ಗಳ ಕೊಡುಗೆ ನೀಡಿದರು. ಈ ಮೂಲಕ ಸೌತ್ ಆಫ್ರಿಕಾ ತಂಡವು 50 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 296 ರನ್ ಕಲೆಹಾಕಿತು.

297 ರನ್ಗಳ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ತಂಡಕ್ಕೆ ಅನುಭವಿ ಸ್ಪಿನ್ನರ್ ಕೇಶವ್ ಮಹಾರಾಜ್ ಆಘಾತ ನೀಡಿದರು. ಮೊದಲ ವಿಕೆಟ್ಗೆ 60 ರನ್ ಪೇರಿಸಿದ ಆಸೀಸ್ ಪಡೆ ಕೇಶವ್ ಮಹರಾಜ್ ಸ್ಪಿನ್ ಮೋಡಿಯಿಂದಾಗಿ ದಿಢೀರ್ ಕುಸಿತಕ್ಕೊಳಗಾಯಿತು. ಇದಾಗ್ಯೂ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿದ ಮಾರ್ಷ್ 88 ರನ್ ಕಲೆಹಾಕಿದರು. ಆದರೆ ಮತ್ತೊಂದೆಡೆ ಮಹಾರಾಜ್ ಸ್ಪಿನ್ ಮೋಡಿಯೊಂದಿಗೆ 33 ರನ್ ನೀಡಿ 5 ವಿಕೆಟ್ ಕಬಳಿಸಿದರು. ಪರಿಣಾಮ ಆಸ್ಟ್ರೇಲಿಯಾ ತಂಡವು 40.5 ಓವರ್ಗಳಲ್ಲಿ 198 ರನ್ಗಳಿಸಿ ಆಲೌಟ್ ಆಯಿತು.

ಈ ಮೂಲಕ ಸೌತ್ ಆಫ್ರಿಕಾ ತಂಡವು 98 ರನ್ಗಳ ಅಮೋಘ ಗೆಲುವು ದಾಖಲಿಸಿದೆ. ಇತ್ತ ಈ ಹೀನಾಯ ಸೋಲಿನೊಂದಿಗೆ ಆಸ್ಟ್ರೇಲಿಯಾ ತಂಡವು 34 ವರ್ಷಗಳ ಬಳಿಕ ಕಾಂಗರೂನಾಡಿನಲ್ಲಿ ಭಾರೀ ಮುಖಭಂಗ ಅನುಭವಿಸಿದೆ. ಅಂದರೆ ಕಳೆದ ಮೂರು ದಶಕಗಳಿಂದ ಆಸ್ಟ್ರೇಲಿಯಾ ತಂಡವು ತವರಿನಲ್ಲಿ ಇಂತಹದೊಂದು ಹೀನಾಯ ಸೋಲನುಭವಿಸಿರಲಿಲ್ಲ.

1991 ರಲ್ಲಿ ಟೀಮ್ ಇಂಡಿಯಾ ವಿರುದ್ಧ 107 ರನ್ಗಳ ಸೋಲನುಭವಿಸಿದ ಬಳಿಕ ಆಸ್ಟ್ರೇಲಿಯಾ ತಂಡವು ತವರಿನಲ್ಲಿ ಯಾವುದೇ ತಂಡದ ವಿರುದ್ಧ ಹೀನಾಯವಾಗಿ ಸೋತಿರಲಿಲ್ಲ. ಆದರೀಗ ಬರೋಬ್ಬರಿ 34 ವರ್ಷಗಳ ಬಳಿಕ ಆಸ್ಟ್ರೇಲಿಯಾ ತಂಡವನ್ನು ಮಕಾಡೆ ಮಲಗಿಸುವಲ್ಲಿ ಸೌತ್ ಆಫ್ರಿಕಾ ತಂಡ ಯಶಸ್ವಿಯಾಗಿದೆ. ಅದು ಕೂಡ ಬರೋಬ್ಬರಿ 98 ರನ್ಗಳಿಂದ ಸೋಲುಣಿಸುವ ಮೂಲಕ ಎಂಬುದು ವಿಶೇಷ.
