ಕರಾಚಿಯಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಪ್ರಥಮ ಇನಿಂಗ್ಸ್ನಲ್ಲಿ ಪಾಕಿಸ್ತಾನ್ ತಂಡದ ನಾಯಕ ಬಾಬರ್ ಆಜಂ ಭರ್ಜರಿ ಶತಕ ಸಿಡಿಸಿ ಮಿಂಚಿದ್ದಾರೆ. ಕಿವೀಸ್ ವೇಗಿಗಳನ್ನು ಅತ್ಯುತ್ತಮವಾಗಿ ಎದುರಿಸಿದ ಬಾಬರ್ 161 ಎಸೆತಗಳಲ್ಲಿ ಶತಕ ಪೂರೈಸಿದರು.
ಈ ಭರ್ಜರಿ ಶತಕದೊಂದಿಗೆ ಬಾಬರ್ 16 ವರ್ಷಗಳ ಹಳೆಯ ದಾಖಲೆಯನ್ನು ಮುರಿದು ಹೊಸ ಇತಿಹಾಸ ನಿರ್ಮಿಸಿರುವುದು ವಿಶೇಷ. ಈ ಹಿಂದೆ ಪಾಕ್ ಪರ ಒಂದು ಕ್ಯಾಲೆಂಡರ್ ವರ್ಷದಲ್ಲಿ ಅತ್ಯಧಿಕ ರನ್ ಬಾರಿಸಿದ ದಾಖಲೆ ಮೊಹಮ್ಮದ್ ಯೂಸುಫ್ ಹೆಸರಿನಲ್ಲಿತ್ತು.
2006 ರಲ್ಲಿ ಮೊಹಮ್ಮದ್ ಯೂಸುಫ್ 33 ಪಂದ್ಯಗಳಿಂದ ಒಟ್ಟು 2435 ರನ್ ಕಲೆಹಾಕಿದ್ದರು. ಇದು ಪಾಕ್ ಪರ ಒಂದು ವರ್ಷದಲ್ಲಿ ಬ್ಯಾಟ್ಸ್ಮ್ವೊಬ್ಬರು ಕಲೆಹಾಕಿದ ಅತ್ಯಧಿಕ ರನ್ ದಾಖಲೆಯಾಗಿದೆ.
ಆದರೀಗ ಶತಕ ಬಾರಿಸುವ ಮೂಲಕ ಬಾಬರ್ ಆಜಂ ಈ ದಾಖಲೆಯನ್ನು ಮುರಿದಿದ್ದಾರೆ. 2022 ರಲ್ಲಿ ಬಾಬರ್ ಆಜಂ 44 ಪಂದ್ಯಗಳಿಂದ ಒಟ್ಟು 2477 ರನ್ ಬಾರಿಸಿ ಹೊಸ ಇತಿಹಾಸ ನಿರ್ಮಿಸಿದ್ದಾರೆ.
ಅಷ್ಟೇ ಅಲ್ಲದೆ ಒಂದು ಕ್ಯಾಲೆಂಡರ್ ವರ್ಷದಲ್ಲಿ ಅತ್ಯಧಿಕ ಬಾರಿ 50+ ರನ್ ಬಾರಿಸಿದ ಕ್ಯಾಪ್ಟನ್ ಎಂಬ ದಾಖಲೆಯನ್ನು ಕೂಡ ಬಾಬರ್ ತಮ್ಮದಾಗಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಈ ವಿಶೇಷ ದಾಖಲೆ ಆಸ್ಟ್ರೇಲಿಯಾ ನಾಯಕ ರಿಕಿ ಪಾಂಟಿಂಗ್ ಹೆಸರಿನಲ್ಲಿತ್ತು.
2005 ರಲ್ಲಿ ಪಾಂಟಿಂಗ್ 24 ಬಾರಿ 50+ ಸ್ಕೋರ್‌ಗಳಿಸಿ ಹೊಸ ವಿಶ್ವ ದಾಖಲೆ ಬರೆದಿದ್ದರು. ಇದೀಗ ಈ ವರ್ಷ 25ನೇ ಬಾರಿ 50+ ಸ್ಕೋರ್ಗಳಿಸುವ ಮೂಲಕ ಬಾಬರ್ ಆಜಂ ಪಾಂಟಿಂಗ್ ದಾಖಲೆಯನ್ನು ಮುರಿದಿದ್ದಾರೆ.
ಸದ್ಯ ಮೊದಲ ದಿನದಾಟದ ಅಂತ್ಯಕ್ಕೆ ಪಾಕ್ ತಂಡವು ಮೊದಲ ಇನಿಂಗ್ಸ್ನಲ್ಲಿ 5 ವಿಕೆಟ್ ಕಳೆದುಕೊಂಡು 317 ರನ್ ಕಲೆಹಾಕಿದೆ. ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ಬಾಬರ್ ಆಜಂ ಅಜೇಯ 161 ರನ್ ಬಾರಿಸಿ 2ನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.