Updated on:Dec 26, 2022 | 7:34 PM
ಜನವರಿ 13 ರಿಂದ ಯುಎಇನಲ್ಲಿ ಶುರುವಾಗಲಿರುವ ಇಂಟರ್ನ್ಯಾಷನಲ್ ಲೀಗ್ ಟಿ20 ಟೂರ್ನಿಯಲ್ಲಿ ಟೀಮ್ ಇಂಡಿಯಾದ ಮಾಜಿ ಆಟಗಾರ ಯೂಸುಫ್ ಪಠಾಣ್ ಕಾಣಿಸಿಕೊಳ್ಳಲಿದ್ದಾರೆ. 2021 ರಲ್ಲಿ ವೃತ್ತಿಜೀವನಕ್ಕೆ ವಿದಾಯ ಹೇಳಿದ್ದ ಪಠಾಣ್ ಆ ಬಳಿಕ ರೋಡ್ ಸೇಫ್ಟಿ ಕ್ರಿಕೆಟ್ ಸಿರೀಸ್ನಲ್ಲಿ ಕಾಣಿಸಿಕೊಂಡಿದ್ದರು.
ಇದೀಗ ಯುಎಇ ಕ್ರಿಕೆಟ್ ಬೋರ್ಡ್ ಆಯೋಜಿಸುತ್ತಿರುವ ಹೊಸ ಟಿ20 ಟೂರ್ನಿ ILT20 ಯಲ್ಲಿ ಯೂಸುಫ್ ಪಠಾಣ್ ದುಬೈ ಕ್ಯಾಪಿಟಲ್ಸ್ ಪರ ಕಣಕ್ಕಿಳಿಯಲಿದ್ದಾರೆ. ವಿಶೇಷ ಎಂದರೆ ದುಬೈ ಕ್ಯಾಪಿಟಲ್ಸ್ ತಂಡವು ಐಪಿಎಲ್ ಫ್ರಾಂಚೈಸಿಯಾದ ಡೆಲ್ಲಿ ಕ್ಯಾಪಿಟಲ್ಸ್ ಮಾಲೀಕತ್ವದಲ್ಲಿದೆ. ಹೀಗಾಗಿಯೇ ಟೀಮ್ ಇಂಡಿಯಾದ ಮಾಜಿ ಸ್ಪೋಟಕ ಆಟಗಾರ ಐಎಲ್ಟಿ20 ಲೀಗ್ಗೆ ನೇರವಾಗಿ ಆಯ್ಕೆಯಾಗಿದ್ದಾರೆ.
ಇಲ್ಲಿ ಮತ್ತೊಂದು ವಿಶೇಷ ಎಂದರೆ ದುಬೈ ಕ್ಯಾಪಿಟಲ್ಸ್ ಪರ ಕನ್ನಡಿಗ ರಾಬಿನ್ ಉತ್ತಪ್ಪ ಕೂಡ ಆಡುತ್ತಿದ್ದಾರೆ. ಅಂದರೆ ಯುಎಇ ಟಿ20 ಲೀಗ್ನಲ್ಲಿ ವಿದೇಶಿ ಆಟಗಾರರಾಗಿ ಭಾರತದಿಂದ ರಾಬಿನ್ ಉತ್ತಪ್ಪ ಹಾಗೂ ಯೂಸುಫ್ ಪಠಾಣ್ ಆಯ್ಕೆಯಾಗಿದ್ದಾರೆ.
ಯುಎಇ ಟಿ20 ಲೀಗ್ನಲ್ಲಿ ಒಟ್ಟು 6 ತಂಡಗಳಿದ್ದು, ಅದರಲ್ಲಿ ಮೂರು ತಂಡಗಳನ್ನು ಐಪಿಎಲ್ ಫ್ರಾಂಚೈಸಿಗಳೇ ಖರೀದಿಸಿರುವುದು ಮತ್ತೊಂದು ವಿಶೇಷ. ಅಂದರೆ ದುಬೈ ಕ್ಯಾಪಿಟಲ್ಸ್,ಅಬುಧಾಬಿ ನೈಟ್ ರೈಡರ್ಸ್ ಹಾಗೂ ಎಂಐ ಎಮಿರೇಟ್ಸ್ ತಂಡಗಳು ಡೆಲ್ಲಿ ಕ್ಯಾಪಿಟಲ್ಸ್, ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ಮುಂಬೈ ಇಂಡಿಯನ್ಸ್ ಮಾಲೀಕತ್ವದಲ್ಲಿದೆ. ಹೀಗಾಗಿ ಹೊಸ ಲೀಗ್ ಬಗ್ಗೆ ನಿರೀಕ್ಷೆಗಳು ಕೂಡ ಹೆಚ್ಚಾಗಿದೆ.
ದುಬೈ ಕ್ಯಾಪಿಟಲ್ಸ್ ತಂಡ ಹೀಗಿದೆ: ರೋವ್ಮನ್ ಪೊವೆಲ್, ದುಷ್ಮಂತ ಚಮೀರಾ, ಹಜರತುಲ್ಲಾ ಝಝೈ, ಫ್ಯಾಬಿಯನ್ ಅಲೆನ್, ಮುಜೀಬ್ ಉರ್ ರೆಹಮಾನ್, ಸಿಕಂದರ್ ರಾಜಾ, ನಿರೋಶನ್ ಡಿಕ್ವೆಲ್ಲಾ, ದಸುನ್ ಶನಕ, ಭಾನುಕಾ ರಾಜಪಕ್ಸೆ, ಡಾನ್ ಲಾರೆನ್ಸ್, ಬ್ಲೆಸ್ಸಿಂಗ್ ಮುಜರಬಾನಿ, ಇಸುರು ಉಡಾನ, ಜಾರ್ಜ್ ಮುನ್ಸಿ, ಫ್ರೆಡ್ ಕ್ಲಾಸ್ಸೆನ್, ಹಝ್ರತ್ ಲುಕ್ಮಾನ್, ಚಿರಾಗ್ ಸೂರಿ, ಜಶ್ ಗಿನ್ಯಾನಿ, ರಾಜಾ ಅಕಿಫ್ ಉಲ್ಲಾ ಖಾನ್, ರಾಬಿನ್ ಉತ್ತಪ್ಪ, ರವಿ ಬೋಪಾರ, ಯೂಸುಫ್ ಪಠಾಣ್. ಜೋ ರೂಟ್.
Published On - 7:31 pm, Mon, 26 December 22