
ಪಾಕಿಸ್ತಾನ್ ತಂಡದ ಸ್ಟಾರ್ ಬ್ಯಾಟರ್ ಬಾಬರ್ ಆಝಂ (Babar Azam) ಮತ್ತೊಂದು ಹೀನಾಯ ದಾಖಲೆ ಬರೆದಿದ್ದಾರೆ. ಅದು ಕೂಡ ಕಳೆದ ಎರಡು ವರ್ಷಗಳಿಂದ ಒಂದೇ ಒಂದು ಶತಕ ಬಾರಿಸದೇ ಎಂಬುದು ವಿಶೇಷ. ಅಂದರೆ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಬಾಬರ್ ಆಝಂ ಶತಕ ಸಿಡಿಸಿ ವರ್ಷಗಳೇ ಕಳೆದಿವೆ.

ಇದಾಗ್ಯೂ ಸೌತ್ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಬಾಬರ್ ಆಝಂ ಕಡೆಯಿಂದ ಶತಕ ನಿರೀಕ್ಷಿಸಲಾಗಿತ್ತು. ಆದರೆ ಮೂರು ಪಂದ್ಯಗಳ ಏಕದಿನ ಸರಣಿಯಲ್ಲೂ ಬಾಬರ್ ಕಡೆಯಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿಲ್ಲ. ಮೊದಲ ಪಂದ್ಯದಲ್ಲಿ 7 ರನ್ಗಳಿಸಿದ್ದ ಬಾಬರ್ ಆಝಂ, ದ್ವಿತೀಯ ಪಂದ್ಯದಲ್ಲಿ 11 ರನ್ ಗಳಿಸಿ ಔಟಾಗಿದ್ದರು.

ಇದೀಗ ಮೂರನೇ ಏಕದಿನ ಪಂದ್ಯದಲ್ಲಿ 27 ರನ್ ಗಳಿಸಿ ರನೌಟ್ ಆಗಿದ್ದಾರೆ. ಇದರೊಂದಿಗೆ ಪಾಕಿಸ್ತಾನ್ ಪರ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಶತಕ ಸಿಡಿಸದೇ ಅತ್ಯಧಿಕ ಇನಿಂಗ್ಸ್ ಆಡಿದ ಟಾಪ್ ಆರ್ಡರ್ ಬ್ಯಾಟರ್ ಎಂಬ ಹೀನಾಯ ದಾಖಲೆಯೊಂದು ಬಾಬರ್ ಆಝಂ ಪಾಲಾಗಿದೆ.

ಬಾಬರ್ ಆಝಂ ಕಳೆದ 82 ಇನಿಂಗ್ಸ್ಗಳಿಂದ ಒಂದೇ ಒಂದು ಶತಕ ಬಾರಿಸಿಲ್ಲ. ಈ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಶತಕದ ಬರ ಎದುರಿಸಿ ಅತ್ಯಧಿಕ ಇನಿಂಗ್ಸ್ ಆಡಿದ ಪಾಕ್ ಬ್ಯಾಟ್ಸ್ಮನ್ ಎನಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಶತಕ ಬಾರಿಸಿದೇ ಇಂಟರ್ನ್ಯಾಷನಲ್ ಕ್ರಿಕೆಟ್ನಲ್ಲಿ ಅತೀ ಹೆಚ್ಚು ಇನಿಂಗ್ಸ್ ಆಡಿದ ವಿಶ್ವದ ಮೂರನೇ ಬ್ಯಾಟರ್ ಎಂಬ ಅನಗತ್ಯ ದಾಖಲೆಯನ್ನು ಕೂಡ ತಮ್ಮದಾಗಿಸಿಕೊಂಡಿದ್ದಾರೆ.

ಅಂದಹಾಗೆ ಬಾಬರ್ ಆಝಂ ಕೊನೆಯ ಬಾರಿ ಶತಕ ಬಾರಿಸಿದ್ದು 2023 ರಲ್ಲಿ. ಮುಲ್ತಾನ್ನಲ್ಲಿ ನಡೆದ ನೇಪಾಳ ವಿರುದ್ಧದ ಪಂದ್ಯದಲ್ಲಿ 151 ರನ್ ಬಾರಿಸಿದ ಬಳಿಕ ಬಾಬರ್ ಆಝಂ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಮೂರಂಕಿ ಮೊತ್ತಗಳಿಸಿಲ್ಲ. ಈ ಮೂಲಕ ಶತಕ ಸಿಡಿಸದೇ ಪಾಕ್ ಪರ ಅತ್ಯಧಿಕ ಇನಿಂಗ್ಸ್ ಆಡಿದ ಬ್ಯಾಟರ್ ಎಂಬ ಹೀನಾಯ ದಾಖಲೆಯೊಂದನ್ನು ಬಾಬರ್ ಆಝಂ ತಮ್ಮದಾಗಿಸಿಕೊಂಡಿದ್ದಾರೆ.