
ಬಿಗ್ ಬ್ಯಾಷ್ ಲೀಗ್ ಸೀಸನ್ 15 ಕ್ಕೆ ವೇದಿಕೆ ಸಿದ್ಧವಾಗಿದೆ. ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಈ ಟಿ೨೦ ಟೂರ್ನಿಯು ಡಿಸೆಂಬರ್ 14 ರಿಂದ ಶುರುವಾಗಲಿದೆ. ವಿಶೇಷ ಎಂದರೆ ಈ ಬಾರಿ ಪಾಕಿಸ್ತಾನ್ ಬ್ಯಾಟರ್ ಬಾಬರ್ ಆಝಂ (Babar Azam) ಬಿಗ್ ಬ್ಯಾಷ್ ಲೀಗ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಸಿಡ್ನಿ ಸಿಕ್ಸರ್ಸ್ ತಂಡವು ಬಾಬರ್ ಆಝಂ ಅವರನ್ನು ಆಯ್ಕೆ ಮಾಡಿದ್ದು, ಅದರಂತೆ ಚೊಚ್ಚಲ ಬಾರಿ ಬಿಬಿಎಲ್ ಟೂರ್ನಿ ಆಡಲು ಪಾಕ್ ಬ್ಯಾಟರ್ ಸಜ್ಜಾಗಿದ್ದಾರೆ. ಆದರೆ ಅದಕ್ಕೂ ಮುನ್ನ ಬಾಬರ್ 56 ನಂಬರ್ನ ಜೆರ್ಸಿಗಾಗಿ ಬೇಡಿಕೆಯಿಟ್ಟಿದ್ದರು.

ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ 56 ನಂಬರ್ ನ ಜೆರ್ಸಿಯಲ್ಲಿ ಕಣಕ್ಕಿಳಿಯುವ ಬಾಬರ್ ಆಝಂ ಬಿಗ್ ಬ್ಯಾಷ್ ಲೀಗ್‌ನಲ್ಲೂ ಅದೇ ನಂಬರ್ ಜೆರ್ಸಿ ಧರಿಸಲು ಬಯಸಿದ್ದರು. ಆದರೆ ಆ ನಂಬರ್ ಅದಾಗಲೇ ಮಿಚೆಲ್ ಸ್ಟಾರ್ಕ್ಗೆ ನೀಡಲಾಗಿದೆ.

ಸಿಡ್ನಿ ಸಿಕ್ಸರ್ಸ್ ತಂಡದ ಪ್ರಮುಖ ವೇಗಿ ಮಿಚೆಲ್ ಸ್ಟಾರ್ಕ್ ಕೂಡ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 56 ನಂಬರ್ನ ಜೆರ್ಸಿಯಲ್ಲಿ ಕಣಕ್ಕಿಳಿಯುತ್ತಿದ್ದಾರೆ. ಸಿಡ್ನಿ ಸಿಕ್ಸರ್ಸ್ ತಂಡದಲ್ಲೂ ಅದೇ ನಂಬರ್ನ ಜೆರ್ಸಿ ಧರಿಸುತ್ತಾರೆ. ಹೀಗಾಗಿ ಈ ನಂಬರ್ ಅನ್ನು ಬಾಬರ್ ಅಝಂಗೆ ನೀಡಲು ಸಾಧ್ಯವಿರಲಿಲ್ಲ. ಇದಾಗ್ಯೂ ಬಾಬರ್ಗೆ 56 ನಂಬರ್ನ ಜೆರ್ಸಿ ನೀಡಿದ್ದಾರೆ.

ಅದು ಕೂಡ 56ರ ಮುಂದೆ ಝೀರೋ ಸೇರಿಸುವ ಮೂಲಕ. ಅದರಂತೆ ಬಿಗ್ ಬ್ಯಾಷ್ ಲೀಗ್ ಸೀಸನ್ 15 ರಲ್ಲಿ ಬಾಬರ್ ಆಝಂ 056 ನಂಬರ್ನ ಜೆರ್ಸಿ ಧರಿಸಿ ಕಣಕ್ಕಿಳಿಯಲಿದ್ದಾರೆ. ಈ ನಂಬರ್ ಧರಿಸಿ ಆಸ್ಟ್ರೇಲಿಯಾ ಪಿಚ್ ನಲ್ಲಿ ಬಾಬರ್ ಕಲೆಹಾಕುವ ನಂಬರ್ಗಳು ಎಷ್ಟೆಂಬುದನ್ನು ಕಾದು ನೋಡಬೇಕಿದೆ.