ಕೊನೆಯ 4 ಇನಿಂಗ್ಸ್… ವಿರಾಟ್ ಕೊಹ್ಲಿಯ ದಾಖಲೆ ಮೇಲೆ ಅಭಿಷೇಕ್ ಶರ್ಮಾ ಕಣ್ಣು
India vs South Africa T20I: ಭಾರತ ಮತ್ತು ಸೌತ್ ಆಫ್ರಿಕಾ ನಡುವಣ 5 ಪಂದ್ಯಗಳ ಟಿ20 ಸರಣಿಯ ಮೊದಲ ಮ್ಯಾಚ್ ಮುಗಿದಿದೆ. ಈ ಸರಣಿಯಲ್ಲಿ ಇನ್ನೂ ನಾಲ್ಕು ಮ್ಯಾಚ್ಗಳಿವೆ. ಈ ಪಂದ್ಯಗಳ ಮೂಲಕ ವಿರಾಟ್ ಕೊಹ್ಲಿಯ 9 ವರ್ಷಗಳ ಹಳೆಯ ದಾಖಲೆ ಮುರಿಯುವ ಅವಕಾಶ ಅಭಿಷೇಕ್ ಶರ್ಮಾ ಮುಂದಿದೆ.
Updated on: Dec 11, 2025 | 1:54 PM

ಟೀಮ್ ಇಂಡಿಯಾದ ಯಂಗ್ ಸೆನ್ಸೇಷನ್ ಅಭಿಷೇಕ್ ಶರ್ಮಾ ಮತ್ತೊಂದು ಭರ್ಜರಿ ದಾಖಲೆಯ ಹೊಸ್ತಿಲಲ್ಲಿದ್ದಾರೆ. ಈ ದಾಖಲೆ ಮುರಿಯಲು ಅಭಿಷೇಕ್ ಮುಂದಿರುವುದು ಕೇವಲ 4 ಇನಿಂಗ್ಸ್ಗಳು ಮಾತ್ರ. ಈ ನಾಲ್ಕು ಇನಿಂಗ್ಸ್ಗಳ ಮೂಲಕ ದಾಖಲೆಗಳ ಸರದಾರ ವಿರಾಟ್ ಕೊಹ್ಲಿಯ ಭರ್ಜರಿ ದಾಖಲೆಯನ್ನು ಮುರಿಯಬಹುದು.

ಹೌದು, ಟಿ20 ಕ್ರಿಕೆಟ್ನಲ್ಲಿ ಒಂದೇ ವರ್ಷ ಅತ್ಯಧಿಕ ರನ್ ಕಲೆಹಾಕಿದ ಭಾರತೀಯ ಬ್ಯಾಟರ್ನ ಭರ್ಜರಿ ದಾಖಲೆ ವಿರಾಟ್ ಕೊಹ್ಲಿಯ ಹೆಸರಿನಲ್ಲಿದೆ. ಕಿಂಗ್ ಕೊಹ್ಲಿ 2016 ರಲ್ಲಿ 29 ಇನಿಂಗ್ಸ್ಗಳ ಮೂಲಕ ಬರೋಬ್ಬರಿ 1614 ರನ್ ಪೇರಿಸಿದ್ದರು. 9 ವರ್ಷಗಳ ಹಿಂದೆ ಬರೆದಿದ್ದ ಈ ದಾಖಲೆಯನ್ನು ಮುರಿಯಲು ಈವರೆಗೆ ಭಾರತದ ಯಾವುದೇ ಬ್ಯಾಟರ್ಗೆ ಸಾಧ್ಯವಾಗಿಲ್ಲ.

ಇದೀಗ 9 ವರ್ಷಗಳ ಬಳಿಕ ಅಭಿಷೇಕ್ ಶರ್ಮಾ ಕಿಂಗ್ ಕೊಹ್ಲಿಯ ದಾಖಲೆಯ ಸಮೀಪಕ್ಕೆ ತಲುಪಿದ್ದಾರೆ. ಅದು ಕೂಡ ಬರೋಬ್ಬರಿ 1516 ರನ್ಗಳೊಂದಿಗೆ. ಅಂದರೆ ಈ ವರ್ಷ ಅಭಿಷೇಕ್ ಶರ್ಮಾ ಆಡಿದ 37 ಇನಿಂಗ್ಸ್ಗಳ ಮೂಲಕ ಒಟ್ಟು 1516 ರನ್ ಕಲೆಹಾಕಿದ್ದಾರೆ.

ಇನ್ನು 99 ರನ್ಗಳಿಸಿದರೆ ಟಿ20 ಕ್ರಿಕೆಟ್ನಲ್ಲಿ ಒಂದೇ ವರ್ಷದಲ್ಲಿ ಅತೀ ಹೆಚ್ಚು ರನ್ ಕಲೆಹಾಕಿದ ಭಾರತೀಯ ಬ್ಯಾಟರ್ ಎಂಬ ದಾಖಲೆಯನ್ನು ತಮ್ಮದಾಗಿಸಿಕೊಳ್ಳಬಹುದು. ಆದರೆ ಅದಕ್ಕಾಗಿ ಅಭಿಷೇಕ್ ಶರ್ಮಾ ಮುಂದಿರುವುದು ಕೇವಲ 4 ಇನಿಂಗ್ಸ್ಗಳು ಮಾತ್ರ ಎಂಬುದು ಇಲ್ಲಿ ಉಲ್ಲೇಖಾರ್ಹ.

ಸೌತ್ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಟಿ20 ಸರಣಿಯ 4 ಪಂದ್ಯಗಳ ಮೂಲಕವೇ ಅಭಿಷೇಕ್ ಶರ್ಮಾ ಒಟ್ಟು 99 ರನ್ ಕಲೆಹಾಕಬೇಕಿದೆ. ಏಕೆಂದರೆ ಭಾರತ-ಸೌತ್ ಆಫ್ರಿಕಾ ಟಿ20 ಸರಣಿಯು ಡಿಸೆಂಬರ್ 19 ರಂದು ಕೊನೆಗೊಳ್ಳಲಿದೆ. ಇದಾದ ಬಳಿಕ ಟೀಮ್ ಇಂಡಿಯಾ ಮತ್ತೆ ಟಿ20 ಪಂದ್ಯವಾಡುವುದು ಜನವರಿಯಲ್ಲಿ. ಹೀಗಾಗಿ ಡಿಸೆಂಬರ್ ತಿಂಗಳೊಳಗೆ 99 ರನ್ ಗಳಿಸಿದರೆ ಮಾತ್ರ ಅಭಿಷೇಕ್ ಶರ್ಮಾ ವಿರಾಟ್ ಕೊಹ್ಲಿ 1614 ರನ್ಗಳ ದಾಖಲೆಯನ್ನು ಮುರಿದು ಹೊಸ ಇತಿಹಾಸವನ್ನು ನಿರ್ಮಿಸಬಹುದು.
