ಐಸಿಸಿ ವರ್ಷದ ಪುರುಷರ ಟಿ20 ಕ್ರಿಕೆಟಿಗ ಪ್ರಶಸ್ತಿಗೆ ನಾಮನಿರ್ದೇಶಿತ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಈ ಬಾರಿ ಪಾಕಿಸ್ತಾನದ ಬಾಬರ್ ಆಝಂ, ಟೀಮ್ ಇಂಡಿಯಾದ ಅರ್ಷದೀಪ್ ಸಿಂಗ್, ಝಿಂಬಾಬ್ವೆಯ ಸಿಕಂದರ್ ರಾಝ ಹಾಗೂ ಆಸ್ಟ್ರೇಲಿಯಾದ ಟ್ರಾವಿಸ್ ಹೆಡ್ ವರ್ಷದ ಟಿ20 ಆಟಗಾರರ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ.
ಆದರೆ ಈ ಪಟ್ಟಿಗೆ ಬಾಬರ್ ಆಝಂ ಆಯ್ಕೆಗೆ ಮಾನದಂಡವೇನು ಎಂಬುದೇ ಈಗ ದೊಡ್ಡ ಪ್ರಶ್ನೆ. ಪಾಕ್ ಆಟಗಾರ ಈ ವರ್ಷ 23 ಟಿ20 ಪಂದ್ಯಗಳನ್ನಾಡಿದ್ದಾರೆ. ಈ ವೇಳೆ 133ರ ಸ್ಟ್ರೈಕ್ ರೇಟ್ನಲ್ಲಿ ಕೇವಲ 738 ರನ್ ಕಲೆಹಾಕಿದ್ದಾರೆ. ಅಂದರೆ ಪ್ರತಿ ಪಂದ್ಯದ ಸರಾಸರಿ ರನ್ಗಳಿಕೆ ಕೇವಲ 33.54 ಮಾತ್ರ.
ಇನ್ನು ಬಾಬರ್ ಆಝಂ ಆಡಿದ 23 ಪಂದ್ಯಗಳಲ್ಲಿ ಪಾಕಿಸ್ತಾನ್ ತಂಡ ಗೆದ್ದಿರುವುದು ಕೇವಲ 7 ಮ್ಯಾಚ್ಗಳಲ್ಲಿ ಮಾತ್ರ. ಅದರಲ್ಲಿ ಐರ್ಲೆಂಡ್ ವಿರುದ್ಧ 3 ಹಾಗೂ ಕೆನಡಾ ವಿರುದ್ಧದ ಒಂದು ಪಂದ್ಯ ಕೂಡ ಸೇರಿದೆ. ಅಂದರೆ 23 ಪಂದ್ಯಗಳಲ್ಲಿ ಪಾಕ್ ತಂಡಕ್ಕೆ ಅರ್ಧದಷ್ಟು ಗೆಲುವು ತಂದುಕೊಡಲು ಕೂಡ ಬಾಬರ್ ಆಝಂನಿಂದ ಸಾಧ್ಯವಾಗಿಲ್ಲ.
ಮತ್ತೊಂದೆಡೆ ಟೀಮ್ ಇಂಡಿಯಾ ಆಟಗಾರ ರೋಹಿತ್ ಶರ್ಮಾ ಈ ವರ್ಷ ಆಡಿದ 11 ಪಂದ್ಯಗಳಲ್ಲಿ 378 ರನ್ ಕಲೆಹಾಕಿದ್ದಾರೆ. ಮತ್ತೊಂದೆಡೆ ಹಾರ್ದಿಕ್ ಪಾಂಡ್ಯ 14 ಇನಿಂಗ್ಸ್ಗಳಿಂದ 352 ರನ್ ಬಾರಿಸಿದ್ದಾರೆ. ಅಂದರೆ ಇಲ್ಲಿ ರೋಹಿತ್ ಶರ್ಮಾ ಅವರ ಅವರೇಜ್ ಸ್ಕೋರ್ 42 ರನ್ ಇದ್ದರೆ, ಹಾರ್ದಿಕ್ ಪಾಂಡ್ಯರ ಸರಾಸರಿ ರನ್ಗಳಿಕೆ 44.00 ಇದೆ.
ಆದರೆ ಇವರಿಬ್ಬರನ್ನೂ ಐಸಿಸಿ ಟಿ20 ಕ್ರಿಕೆಟಿಗ ಪ್ರಶಸ್ತಿಗೆ ಪಟ್ಟಿಗೆ ಪರಿಗಣಿಸದೇ ಕೇವಲ 33 ರ ಸರಾಸರಿಯಲ್ಲಿ ರನ್ಗಳಿಸಿರುವ ಬಾಬರ್ ಆಝಂ ಅವರನ್ನು ಅವಾರ್ಡ್ಸ್ಗೆ ನಾಮನಿರ್ದೇಶನ ಮಾಡಿರುವುದೇ ಈಗ ದೊಡ್ಡ ಪ್ರಶ್ನೆಯಾಗಿದೆ. ಇದೀಗ ಪ್ರಶಸ್ತಿ ಪಟ್ಟಿಯಲ್ಲಿರುವ ನಾಲ್ವರಲ್ಲಿ ಒಬ್ಬರಾಗಿ ಕಾಣಿಸಿಕೊಂಡಿರುವ ಬಾಬರ್ ಆಝಂಗೆ ವರ್ಷದ ಟಿ20 ಕ್ರಿಕೆಟಿಗ ಪ್ರಶಸ್ತಿ ಲಭಿಸಿದರೆ ಅದಕ್ಕಿಂತ ದೊಡ್ಡ ದುರಂತ ಮತ್ತೊಂದಿಲ್ಲ ಎನ್ನದೇ ವಿಧಿಯಿಲ್ಲ..!