
ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯ ಮೊದಲೆರಡು ಪಂದ್ಯಗಳನ್ನು ಆಡಿದ್ದ ಶ್ರೇಯಸ್ ಆಯ್ಯರ್ ಆನಂತರ ಟೀಂ ಇಂಡಿಯಾದಿಂದ ಹೊರಬಿದ್ದಿದ್ದರು. ಬಳಿಕ ಅಯ್ಯರ್ ಇಂಜುರಿ ಸಮಸ್ಯೆಯಿಂದ ಬಳಲುತ್ತಿರುವುದರಿಂದ ಅವರನ್ನು ತಂಡದಿಂದ ಕೈಬಿಡಲಾಗಿದೆ ಎಂದು ಹೇಳಲಾಗಿತ್ತು.

ಇಂಜುರಿಯಿಂದಾಗಿ ಎನ್ಸಿಎ ಸೇರಿದ್ದ ಅಯ್ಯರ್ಗೆ ಚೇತರಿಸಿಕೊಂಡ ಬಳಿಕ ರಣಜಿನ ಆಡುವಂತೆ ಸೂಚನೆ ನೀಡಲಾಗಿತ್ತು. ಆದರೆ ಕುಂಟು ನೆಪ ಹೇಳಿದ್ದ ಅಯ್ಯರ್ ನಾನಿನ್ನು ಚೇತರಿಸಿಕೊಂಡಿಲ್ಲ ಎಂದಿದ್ದರು. ಆದರೆ ಅಯ್ಯರ್ ಪೂರ್ಣ ಫಿಟ್ ಇದ್ದಾರೆ ಎಂದು ಎನ್ಸಿಎ ಅಧಿಕಾರಿಗಳು ವರದಿ ನೀಡಿದ ಬಳಿಕ ಅಯ್ಯರ್ ಮೇಲೆ ಬಿಸಿಸಿಐ ಕೋಪಗೊಂಡಿತ್ತು.

ಸೂಚನೆಯ ನಂತರವೂ ರಣಜಿ ಆಡದ ಶ್ರೇಯಸ್ ಅಯ್ಯರ್ ಅವರನ್ನು ಬಿಸಿಸಿಐ ವಾರ್ಷಿಕ ಕೇಂದ್ರ ಒಪ್ಪಂದದಿಂದ ಕೈಬಿಟ್ಟಿತ್ತು. ಆ ನಂತರ ಕೆಟ್ಟ ಮೇಲೆ ಬುದ್ದಿ ಬಂತು ಎಂಬಂತೆ ಗುತ್ತಿಗೆಯಿಂದ ಹೊರಬಿದ್ದ ಬಳಿಕ ರಣಜಿ ಅಖಾಡಕ್ಕಿಳಿದಿದ್ದ ಅಯ್ಯರ್ ಮುಂಬೈ ತಂಡವನ್ನು ಚಾಂಪಿಯನ್ ಮಾಡುವಲ್ಲಿ ಶ್ರಮಿಸಿದ್ದರು.

ಸೆಮಿಫೈನಲ್ ಹಾಗೂ ಫೈನಲ್ನ ಮೊದಲ ಇನ್ನಿಂಗ್ಸ್ನಲ್ಲಿ ಒಂದಂಕಿಗೆ ಸುಸ್ತಾಗಿದ್ದ ಅಯ್ಯರ್, ಫೈನಲ್ ಪಂದ್ಯದ ಎರಡನೇ ಇನ್ನಿಂಗ್ಸ್ನಲ್ಲಿ 95 ರನ್ಗಳ ಗೆಲುವಿನ ಇನ್ನಿಂಗ್ಸ್ ಆಡಿದರು. ಅಯ್ಯರ್ ಅವರ ಈ ಇನ್ನಿಂಗ್ಸ್ ಮುಂಬೈ ತಂಡವನ್ನು ಚಾಂಪಿಯನ್ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿತ್ತು.

ಇದೀಗ ಮುಂಬೈ ತಂಡವನ್ನು ಚಾಂಪಿಯನ್ ಮಾಡಿದ ಶ್ರೇಯಸ್ ಅಯ್ಯರ್ ಅವರನ್ನು ಮತ್ತೆ ಬಿಸಿಸಿಐನ ವಾರ್ಷಿಕ ಒಪ್ಪಂದಕ್ಕೆ ಸೇರಿಸಿಕೊಳ್ಳಲಾಗುವುದು ಎಂಬ ಮಾತು ಕೇಳಿಬರುತ್ತಿದೆ. ಈ ಬಗ್ಗೆ ಹಲವು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ಅಲ್ಲದೆ ರಣಜಿ ಫೈನಲ್ ಪಂದ್ಯದಲ್ಲಿ ಇಂಜುರಿಗೊಳಗಾಗಿದ್ದ ಅಯ್ಯರ್ ಫೀಲ್ಡಿಂಗ್ ಮಾಡಿರಲಿಲ್ಲ. ಹೀಗಾಗಿ ಅಯ್ಯರ್ ಅವರ ಇಂಜುರಿ ಗಂಭೀರವಾಗಿದ್ದು, ಅವರು ಈ ಬಾರಿಯೂ ಐಪಿಎಲ್ ಆಡುವುದು ಡೌಟ್ ಎಂಬ ವದಂತಿ ಹರಡಿತ್ತು. ಆದರೀಗ ಸಿಕ್ಕಿರುವ ಮಾಹಿತಿ ಪ್ರಕಾರ ಅಯ್ಯರ್, ನಾಳೆ ಅಂದರೆ ಶುಕ್ರವಾರ ಕೆಕೆಆರ್ ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.