
2025 ರ ಏಷ್ಯಾಕಪ್ ಸಮಯದಲ್ಲಿ ಭುಗಿಲೆದ್ದ ವಿವಾದ ಇನ್ನೂ ಕಡಿಮೆಯಾಗಿಲ್ಲ. ಏತನ್ಮಧ್ಯೆ, ಏಷ್ಯಾಕಪ್ ಟ್ರೋಫಿಗೆ ಸಂಬಂಧಿಸಿದಂತೆ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಮತ್ತು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಧ್ಯಕ್ಷ ಮೊಹ್ಸಿನ್ ನಖ್ವಿ ತನ್ನ ಮೊಂಡುತನವನ್ನು ಮುಂದುವರೆಸಿದ್ದು ತನ್ನ ಅನುಮತಿ ಇಲ್ಲದೆ ಏಷ್ಯಾಕಪ್ ಟ್ರೋಫಿಯನ್ನು ಬಿಸಿಸಿಐಗೆ ಹಸ್ತಾಂತರಿಸುವಂತಿಲ್ಲ ಎಂದು ಆದೇಶಿದ್ದಾರೆ ಎಂದು ವರದಿಯಾಗಿದೆ.

ಮೊಹ್ಸಿನ್ ನಖ್ವಿಯ ಈ ನಡೆಯಿಂದ ಮತ್ತಷ್ಟು ಕೆರಳಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ, ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯಿಂದ ಅವರನ್ನು ಹೊರಹಾಕಲು ಸಿದ್ಧತೆ ನಡೆಸುತ್ತಿದೆ ಎಂದು ವರದಿಯಾಗಿದೆ. ಮಾತ್ರವಲ್ಲದೆ ಎಸಿಸಿ ಅಧ್ಯಕ್ಷ ಸ್ಥಾನದಿಂದಲೂ ನಖ್ವಿಯನ್ನು ಕೆಳಗಿಳಿಸಲು ಇತರ ಸದಸ್ಯ ಮಂಡಳಿಗಳಿಂದ ಬಿಸಿಸಿಐ ನೆರವು ಕೋರಿದೆ ಎಂದು ವರದಿಯಾಗಿದೆ.

ಪಿಟಿಐ ವರದಿಗಳ ಪ್ರಕಾರ, ಮೊಹ್ಸಿನ್ ನಖ್ವಿ ಅವರನ್ನು ಐಸಿಸಿ ನಿರ್ದೇಶಕ ಸ್ಥಾನದಿಂದ ತೆಗೆದುಹಾಕುವಂತೆ ಬಿಸಿಸಿಐ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯನ್ನು ಕೋರಲು ಯೋಜಿಸುತ್ತಿದೆ. ಪಿಸಿಬಿ ಅಧ್ಯಕ್ಷರು ಏಷ್ಯಾಕಪ್ ಟ್ರೋಫಿಯನ್ನು ಹಾಲಿ ಚಾಂಪಿಯನ್ ಭಾರತಕ್ಕೆ ಇದುವರೆಗೂ ಹಸ್ತಾಂತರಿಸಿಲ್ಲ ಇದು ನಿಯಮಗಳಿಗೆ ವಿರುದ್ಧವಾಗಿದೆ ಎಂಬುದು ಬಿಸಿಸಿಐ ವಾದವಾಗಿದೆ.

ಏಷ್ಯಾಕಪ್ ಫೈನಲ್‌ನಲ್ಲಿ ಭಾರತ, ಪಾಕಿಸ್ತಾನವನ್ನು ಸೋಲಿಸಿ ಪ್ರಶಸ್ತಿಯನ್ನು ಗೆದ್ದುಕೊಂಡಿತು, ಆದರೆ ಭಾರತ ತಂಡದ ಆಟಗಾರರು ಮೊಹ್ಸಿನ್ ನಖ್ವಿ ಅವರಿಂದ ಟ್ರೋಫಿಯನ್ನು ಸ್ವೀಕರಿಸಲು ನಿರಾಕರಿಸಿದರು. ಇದರಿಂದ ಮುಜುಗರಕ್ಕೊಳಗಾಗಿದ್ದ ನಖ್ವಿ ಟ್ರೋಫಿಯನ್ನು ತನ್ನದೊಂದಿಗೆ ತೆಗೆದುಕೊಂಡು ಹೋಗಿದ್ದರು. ಇದು ವಿವಾದಕ್ಕೆ ಕಾರಣವಾಗಿತ್ತು.

ಪಿಟಿಐ ವರದಿಗಳ ಪ್ರಕಾರ, ಏಷ್ಯಾಕಪ್ ಫೈನಲ್ ನಂತರ ಎಸಿಸಿ ಅಧ್ಯಕ್ಷ ಮೊಹ್ಸಿನ್ ನಖ್ವಿ ನಡೆದುಕೊಂಡ ರೀತಿಯನ್ನು ಐಸಿಸಿಯೊಂದಿಗೆ ಪ್ರಸ್ತಾಪಿಸಲು ಬಿಸಿಸಿಐ ಯೋಜಿಸುತ್ತಿದೆ. ಈ ಮೂಲಕ ಐಸಿಸಿ ನಿರ್ದೇಶಕ ಸ್ಥಾನದಿಂದ ಅವರನ್ನು ವಜಾಗೊಳಿಸಲು ಬಿಸಿಸಿಐ, ಐಸಿಸಿಗೆ ಮನವಿ ಮಾಡಲಿದೆ ಎಂದು ವರದಿಯಾಗಿದೆ. ಇದೀಗ ಮೊಹ್ಸಿನ್ ನಖ್ವಿ ವಿರುದ್ಧ ಐಸಿಸಿ ಯಾವ ಕ್ರಮ ಕೈಗೊಳ್ಳಲಾಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.