
ಮುಂಬರುವ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಿಂದ ಹೊರಗುಳಿಯಲು ಟೀಮ್ ಇಂಡಿಯಾ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ನಿರ್ಧಾರ ತೆಗೆದುಕೊಂಡಿದ್ದಾರೆ ಎಂಬ ಸುದ್ದಿ ವೈರಲ್ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಪ್ರಶ್ನೆಗಳು ಎದ್ದಿವೆ.

ಕೊಹ್ಲಿ ಹಾಗೂ ರೋಹಿತ್ ಶರ್ಮಾ ನಡುವೆ ನಾಯಕತ್ವ ವಿಚಾರಕ್ಕೆ ಜಗಳವಾಗಿ ವಿರಾಟ್ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ, ಸದ್ಯ ಬಿಸಿಸಿಐ ಈ ಎಲ್ಲ ಅಂತೆ-ಕಂತೆಗಳಿಗೆ ತೆರೆ ಎಳೆದಿದೆ.

ಬಿಸಿಸಿಐ ಮೂಲಗಳು ನ್ಯೂಸ್ 9ಗೆ ಈ ಕುರಿತು ಸ್ಪಷ್ಟನೆ ನೀಡಿದೆ, ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ನಾನು ಲಭ್ಯವಿಲ್ಲ ಎಂದು ಕೊಹ್ಲಿ ನಮ್ಮ ಬಳಿ ಹೇಳಿದ್ದಾರೆ. ಅವರು ಆ ಸಂದರ್ಭದಲ್ಲಿ ಕುಟುಂಬದ ಜೊತೆ ಸಮಯ ಕಳೆಯಲು ಬಯಸಿದ್ದಾರೆ. ಅಲ್ಲದೆ ಅವರು ಕಳೆದ ಅನೇಕ ತಿಂಗಳುಗಳಿಂದ ಐಪಿಎಲ್, ಟಿ20 ವಿಶ್ವಕಪ್ ಹೀಗೆ ಸತತ ಕ್ರಿಕೆಟ್ ಆಡಿದ್ದಾರೆ. ಸಾಮಾಜಿಕ ತಾಣಗಳಲ್ಲಿನ ರೂಮರ್ಸ್ ಓದಬೇಡಿ, ರೋಹಿತ್-ಕೊಹ್ಲಿ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಬಿಸಿಸಿಐ ಹೇಳಿದೆ.

ಅಲ್ಲದೆ ಆಫ್ರಿಕಾ ಏಕದಿನ ಸರಣಿ ವೇಳೆ ಕೊಹ್ಲಿ ಮಗಳಿನ ಮೊದಲ ವರ್ಷದ ಹುಟ್ಟುಹಬ್ಬ ಇರುವ ಕಾರಣ ಅವರು ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಹೇಳಲಾಗಿದೆ.

ಈ ಹಿಂದೆ ಏಕದಿನ ನಾಯಕನ ಸ್ಥಾನದಿಂದ ಕೆಳಗಿಳಿಸಿದ್ದಕ್ಕೆ ಕೊಹ್ಲಿ ಅವರು ಬಿಸಿಸಿಐ ಮೇಲೆ ಕೋಪಗೊಂಡಿದ್ದರು ಎಂಬ ವದಂತಿ ಹಬ್ಬಿತ್ತು. ನಾಯಕನ ಸ್ಥಾನದಿಂದ ಕೆಳಗಿಳಿಯಿರಿ ಎಂದು ಬಿಸಿಸಿಐ ಕೊಹ್ಲಿ ಅವರಿಗೆ 48 ಗಂಟೆಗಳ ಕಾಲಾವಕಾಶ ನೀಡಿತ್ತಂತೆ, ಇದಕ್ಕೆ ವಿರಾಟ್ ಯಾವುದೇ ಪ್ರತಿಕ್ರಿಯೆ ನೀಡದ ಕಾರಣ 49ನೇ ಗಂಟೆಯಲ್ಲಿ ಹೊಸ ನಾಯಕನ ಘೋಷಣೆ ಮಾಡಿತಂತೆ. ಈ ಬೇಸರ, ಕೋಪದಿಂದ ಕಿಂಗ್ ಕೊಹ್ಲಿ ಇನ್ನೂ ಹೊರಬಂದಿಲ್ಲ ಎಂದು ಒಂದು ಕಡೆಯಿಂದ ಹೇಳಲಾಗುತ್ತಿತ್ತು.

ಅಲ್ಲದೆ ಕೊಹ್ಲಿ ಮುಂಬೈನಲ್ಲಿ ಆಯೋಜಿಸಿದ್ದ ಪ್ಯಾಕ್ಟೀಸ್ ಸೆಷನ್ಗೂ ಹಾಜರಾಗಿಲ್ಲವಂತೆ. ಕ್ವಾರಂಟೈನ್ಗೂ ಮುನ್ನ ಭಾರತದ ಬಹುತೇಕ ಆಟಗಾರರು ಅಭ್ಯಾಸದಲ್ಲಿ ಪಾಲ್ಗೊಂಡಿದ್ದರು. ಆದರೆ, ಯಾವುದೇ ಪ್ರ್ಯಾಕ್ಟೀಸ್ಗೆ ವಿರಾಟ್ ಕೊಹ್ಲಿ ಹಾಜರಿರಲ್ಲವಂತೆ. ಅಲ್ಲದೆ ಕ್ವಾರಂಟೈನ್ಗೂ ಒಳಪಟ್ಟಿಲ್ಲ ಎಂದು ಬಿಸಿಸಿಐ ಮೂಲಗಳು ಖಾಸಗಿ ವೆಬ್ಸೈಟ್ಗೆ ತಿಳಿಸಿವೆ ಎಂಬ ವರದಿ ಕೂಡ ಆಗಿತ್ತು.

ಇನ್ನು ರೋಹಿತ್ ಶರ್ಮಾ ಅಭ್ಯಾಸದ ವೇಳೆ ಗಾಯಗೊಂಡಿರುವ ಕಾರಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಿಂದ ಹೊರಗುಳಿಯಲಿದ್ದಾರೆ. ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಇರುವ ಭಾರತ ‘ಎ’ ತಂಡದ ನಾಯಕತ್ವ ವಹಿಸಿಕೊಂಡಿದ್ದ ಗುಜರಾತ್ ಮೂಲದ ಬ್ಯಾಟ್ಸ್ಮನ್ ಪ್ರಿಯಾಂಕ್ ಪಾಂಚಾಲ್ ಅವರನ್ನು ರೋಹಿತ್ಗೆ ಬದಲಿ ಆಟಗಾರನನ್ನಾಗಿ ಟೆಸ್ಟ್ ತಂಡಕ್ಕೆ ಆಯ್ಕೆ ಮಾಡಲಾಗಿದೆ.

ರೋಹಿತ್ ಶರ್ಮಾ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿ ವೇಳೆ ಸಂಪೂರ್ಣ ಫಿಟ್ ಆಗುವ ಸಾಧ್ಯತೆ ಇದೆ ಎಂದು ಬಿಸಿಸಿಐ ಹೇಳಿದೆ.