ಪ್ರತಿಷ್ಠಿತ ಬಾರ್ಡರ್-ಗವಾಸ್ಕರ್ ಸರಣಿಗೂ ಮುನ್ನ ಆಸ್ಟ್ರೇಲಿಯಾ ತಂಡಕ್ಕೆ ಆಘಾತ ಎದುರಾಗಿದೆ. ತಂಡದ ಪ್ರಮುಖ ಆಲ್ರೌಂಡರ್ ಕ್ಯಾಮರೋನ್ ಗ್ರೀನ್ ಈ ಸರಣಿಯಿಂದ ಹೊರಗುಳಿದಿದ್ದಾರೆ. ಸೊಂಟದ ನೋವಿನಿಂದ ಬಳಲುತ್ತಿರುವ ಗ್ರೀನ್ ಶೀಘ್ರದಲ್ಲೇ ಶಸ್ತ್ರಚಿಕತ್ಸೆಗೆ ಒಳಗಾಗಲಿದ್ದು, ಹೀಗಾಗಿ ನವೆಂಬರ್ 22 ರಿಂದ ಶುರುವಾಗಲಿರುವ BGT ಸರಣಿಗೆ ಅಲಭ್ಯರಾಗಲಿದ್ದಾರೆ.
ಕ್ಯಾಮರೋನ್ ಗ್ರೀನ್ ಅವರ ಸೊಂಟದ ಬೆನ್ನುಮೂಳೆಯಲ್ಲಿ ಒತ್ತಡದಿಂದಾಗಿ ಸಣ್ಣ ಬಿರುಕು ಉಂಟಾಗಿದ್ದು, ವೈದ್ಯರು ಸರ್ಜರಿ ಅನಿವಾರ್ಯ ಎಂದು ತಿಳಿಸಿದ್ದಾರೆ. ಹೀಗಾಗಿ ಭಾರತದ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ.
ಇತ್ತ ಕ್ಯಾಮರೋನ್ ಗ್ರೀನ್ ಅವರ ಅಲಭ್ಯತೆಯು ಆಸ್ಟ್ರೇಲಿಯಾ ತಂಡದ ಮೇಲೆ ಪರಿಣಾಮ ಬೀರಲಿದೆ. ಏಕೆಂದರೆ ಆಸೀಸ್ ಪಡೆಯಲ್ಲಿ ಆಲ್ರೌಂಡರ್ ಆಗಿ ಗ್ರೀನ್ ಅತ್ಯುತ್ತಮ ಪ್ರದರ್ಶನ ನೀಡುತ್ತಾ ಬಂದಿದ್ದಾರೆ. ಇದೀಗ ಪ್ರಮುಖ ಸರಣಿಗೆ ಅವರು ಅಲಭ್ಯರಾಗುತ್ತಿರುದರಿಂದ ಬದಲಿ ಆಲ್ರೌಂಡರ್ನನ್ನು ಆಯ್ಕೆ ಮಾಡಬೇಕಾದ ಅನಿವಾರ್ತೆ ಕ್ರಿಕೆಟ್ ಆಸ್ಟ್ರೇಲಿಯಾ ಮುಂದಿದೆ.
ಇನ್ನು ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಟೆಸ್ಟ್ ಸರಣಿಯು ನವೆಂಬರ್ 22 ರಿಂದ ಶುರುವಾಗಲಿದ್ದು, ಈ ಸರಣಿಯಲ್ಲಿ ಒಟ್ಟು ಐದು ಪಂದ್ಯಗಳನ್ನಾಡಲಾಗುತ್ತದೆ. ಮೊದಲ ಪಂದ್ಯವು ಪರ್ತ್ನಲ್ಲಿ ನಡೆದರೆ, ಎರಡನೇ ಪಂದ್ಯವು ಡಿಸೆಂಬರ್ 6 ರಿಂದ ಅಡಿಲೇಡ್ನಲ್ಲಿ ಶುರುವಾಗಲಿದೆ.
ಹಾಗೆಯೇ ಡಿಸೆಂಬರ್ 14 ರಿಂದ ಆರಂಭವಾಗಲಿರುವ ಮೂರನೇ ಪಂದ್ಯಕ್ಕೆ ಬ್ರಿಸ್ಬೇನ್ ಆತಿಥ್ಯವಹಿಸಿದರೆ, ನಾಲ್ಕನೇ ಪಂದ್ಯವು ಮೆಲ್ಬೋರ್ನ್ನಲ್ಲಿ ನಡೆಯಲಿದೆ. ಈ ಪಂದ್ಯವು ಡಿಸೆಂಬರ್ 26 ರಿಂದ ಶುರುವಾಗಲಿದೆ. ಇನ್ನು ಜನವರಿ 3 ರಿಂದ ಆರಂಭವಾಗಲಿರುವ ಕೊನೆಯ ಪಂದ್ಯಕ್ಕೆ ಸಿಡ್ನಿ ಕ್ರಿಕೆಟ್ ಸ್ಟೇಡಿಯಂ ಆತಿಥ್ಯವಹಿಸಲಿದೆ.