
ಚಾಂಪಿಯನ್ಸ್ 2025 ಕ್ಕಾಗಿ ಶೀಘ್ರದಲ್ಲೇ ಭಾರತ ತಂಡದ ಘೋಷಣೆಯಾಗಲಿದೆ. 15 ಸದಸ್ಯರ ಈ ತಂಡದಲ್ಲಿ ಟೀಮ್ ಇಂಡಿಯಾದ ಹಿರಿಯ ಆಲ್ರೌಂಡರ್ ರವೀಂದ್ರ ಜಡೇಜಾ ಕಾಣಿಸಿಕೊಳ್ಳುವುದು ಅನುಮಾನ. ಏಕೆಂದರೆ ಹಿರಿಯ ಆಟಗಾರರನ್ನು ತಂಡದಿಂದ ಕೈ ಬಿಡಲು ಬಿಸಿಸಿಐ ಆಯ್ಕೆ ಸಮಿತಿ ಚಿಂತಿಸಿದೆ.

ಈ ಪಟ್ಟಿಯಲ್ಲಿ 36 ವರ್ಷದ ರವೀಂದ್ರ ಜಡೇಜಾ ಅವರು ಹೆಸರು ಮುಂಚೂಣಿಯಲ್ಲಿ ಕಾಣಿಸಿಕೊಂಡಿದೆ. 2023ರ ವಿಶ್ವಕಪ್ ಬಳಿಕ ಜಡೇಜಾ ಯಾವುದೇ ಏಕದಿನ ಪಂದ್ಯವಾಡಿಲ್ಲ. ಹೀಗಾಗಿ ಅವರನ್ನು ಚಾಂಪಿಯನ್ಸ್ ಟ್ರೋಫಿ ತಂಡಕ್ಕೆ ಆಯ್ಕೆ ಮಾಡದಿರಲು ಚರ್ಚಿಸಲಾಗಿದೆ ಎಂದು ವರದಿಯಾಗಿದೆ.

ರವೀಂದ್ರ ಜಡೇಜಾ ಮುಂಬರುವ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಕಾಣಿಸಿಕೊಂಡರೆ ಮಾತ್ರ ಅವರಿಗೆ ಚಾಂಪಿಯನ್ಸ್ ಟ್ರೋಫಿ ತಂಡದಲ್ಲಿ ಸ್ಥಾನ ಸಿಗಲಿದೆ. ಒಂದು ವೇಳೆ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಿಂದ ಅವರನ್ನು ಕೈ ಬಿಟ್ಟರೆ ಅವರ ಒಡಿಐ ಕೆರಿಯರ್ ಅಂತ್ಯ ಎಂದೇ ಹೇಳಬಹುದು.

ಏಕೆಂದರೆ ತಂಡದಲ್ಲಿ ಸ್ಪಿನ್ ಆಲ್ರೌಂಡರ್ಗಳಾಗಿ ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್ ಇದ್ದಾರೆ. ಇದೀಗ ಯುವ ಆಟಗಾರ ತನುಷ್ ಕೋಟ್ಯಾನ್ ಕೂಡ ಸ್ಪಿನ್ ಆಲ್ರೌಂಡರ್ ಆಗಿ ಭಾರತ ತಂಡದ ಕದ ತಟ್ಟುತ್ತಿದ್ದಾರೆ. ಹೀಗಾಗಿ ಭವಿಷ್ಯದ ದೃಷ್ಟಿಯಿಂದ ಚಾಂಪಿಯನ್ಸ್ ಟ್ರೋಫಿ ತಂಡದಿಂದ ಜಡೇಜಾ ಅವರನ್ನು ಕೈ ಬಿಡುವ ಸಾಧ್ಯತೆ ಹೆಚ್ಚಿದೆ.

ಇತ್ತ ಈ ಬಗ್ಗೆ ರವೀಂದ್ರ ಜಡೇಜಾ ಅವರಿಗೂ ಸೂಚನೆ ಸಿಕ್ಕಿರುವ ಸಾಧ್ಯತೆಯಿದೆ. ಇದೇ ಕಾರಣದಿಂದಾಗಿ ಅವರು ಸೋಷಿಯಲ್ ಮೀಡಿಯಾದಲ್ಲಿ ಟೆಸ್ಟ್ ಜೆರ್ಸಿಯ ಫೋಟೋ ಹಂಚಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಇದು ಜಡೇಜಾ ಟೆಸ್ಟ್ ಕ್ರಿಕೆಟ್ಗೆ ವಿದಾಯ ಹೇಳುವ ಅಥವಾ ಟೆಸ್ಟ್ನಲ್ಲಿ ಮಾತ್ರ ಮುಂದುವರೆಯಲಿರುವ ಮುನ್ಸೂಚನೆ ಎಂದು ವಿಶ್ಲೇಷಿಸಲಾಗುತ್ತಿದೆ.

ಒಟ್ಟಿನಲ್ಲಿ ಟೀಮ್ ಇಂಡಿಯಾ ಪರ 197 ಏಕದಿನ ಪಂದ್ಯಗಳನ್ನಾಡಿರುವ ರವೀಂದ್ರ ಜಡೇಜಾ ಅವರ ಒಡಿಐ ಭವಿಷ್ಯ ಮುಂಬರುವ ಇಂಗ್ಲೆಂಡ್ ವಿರುದ್ಧದ ಸರಣಿಯೊಂದಿಗೆ ನಿರ್ಧಾರವಾಗಲಿದೆ. ಈ ಸರಣಿಗೆ ಆಯ್ಕೆಯಾಗದಿದ್ದರೆ 36 ವರ್ಷದ ಹಿರಿಯ ಆಟಗಾರನ ಸೀಮಿತ ಓವರ್ಗಳ ಕೆರಿಯರ್ ಕೊನೆಗೊಳ್ಳುವುದು ಖಚಿತ.