ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಬರೆದಿರುವ 100 ಶತಕಗಳ ಸರ್ವಕಾಲೀಕ ಶ್ರೇಷ್ಠ ದಾಖಲೆಯನ್ನು ಮುರಿಯಲು ಸಾಧ್ಯವೇ?. ಆಗಾಗ್ಗೆ ಕೇಳಿ ಬರುವ ಈ ಪ್ರಶ್ನೆಗೆ ಉತ್ತರ ನೀಡಿದ್ದಾರೆ ಕ್ರಿಕೆಟ್ ಲೆಜೆಂಡ್ ಕ್ಲೈವ್ ಲಾಯ್ಡ್.
ನನ್ನ ಪ್ರಕಾರ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿರುವ 100 ಶತಕಗಳ ದಾಖಲೆ ಮುರಿಯಲು ವಿರಾಟ್ ಕೊಹ್ಲಿಯಿಂದ ಸಾಧ್ಯವಿದೆ. ಆತ ಎಷ್ಟು ವರ್ಷ ಆಡುತ್ತಾನೆ ಎಂಬುದರ ಬಗ್ಗೆ ನನಗೆ ಗೊತ್ತಿಲ್ಲ. ಆದರೆ ವಿರಾಟ್ ಕೊಹ್ಲಿ ಇನ್ನೂ ಕೂಡ ಯಂಗ್ ಆಗಿದ್ದಾರೆ. ಹೀಗಾಗಿ ಶತಕಗಳ ಶತಕ ಸಿಡಿಸಿ ಕಿಂಗ್ ಕೊಹ್ಲಿ ಹೊಸ ಇತಿಹಾಸ ನಿರ್ಮಿಸುವ ವಿಶ್ವಾಸವಿದೆ ಎಂದು ಲಾಯ್ಡ್ ತಿಳಿಸಿದ್ದಾರೆ.
ಪ್ರಸ್ತುತ ವಿರಾಟ್ ಕೊಹ್ಲಿ ಆಡುವ ರೀತಿಯನ್ನು ನೋಡಿದರೆ ಆತ ಎಲ್ಲವನ್ನೂ ಸಾಧಿಸುತ್ತಾನೆ ಎಂಬ ನಂಬಿಕೆಯಿದೆ. ವಿರಾಟ್ ಅದ್ಭುತ ಫಿಟ್ನೆಸ್ ಹೊಂದಿರುವ ಅಥ್ಲೀಟ್. ಹಾಗಾಗಿ ಶತಕಗಳ ದಾಖಲೆ ಕಷ್ಟವೇನಲ್ಲ. ಶತಕಗಳ ಸೆಂಚುರಿ ದಾಖಲೆ ನಿರ್ಮಿಸಿದರೆ ನನಗೂ ತುಂಬಾ ಸಂತೋಷವಾಗುತ್ತದೆ ಎಂದು ಕ್ಲೈವ್ ಲಾಯ್ಡ್ ಹೇಳಿದ್ದಾರೆ.
1975 ಮತ್ತು 1979 ರಲ್ಲಿ ಕ್ಲೈವ್ ಲಾಯ್ಡ್ ನಾಯಕತ್ವದಲ್ಲಿ ವೆಸ್ಟ್ ಇಂಡೀಸ್ ತಂಡವು ಏಕದಿನ ವಿಶ್ವಕಪ್ ಗೆದ್ದುಕೊಂಡಿತ್ತು. ಇದೀಗ ವಿಂಡೀಸ್ನ ಖ್ಯಾತ ದಿಗ್ಗಜ ವಿರಾಟ್ ಕೊಹ್ಲಿ ಶತಕಗಳ ಶತಕ ಸಿಡಿಸಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ.
ಈ ಶತಕಗಳ ದಾಖಲೆ ಬರೆಯಲು ವಿರಾಟ್ ಕೊಹ್ಲಿಗೆ ಕೇವಲ 21 ಸೆಂಚುರಿಗಳ ಅವಶ್ಯಕತೆಯಿದೆ. ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 578 ಇನಿಂಗ್ಸ್ ಆಡಿರುವ ಕೊಹ್ಲಿ ಈಗಾಗಲೇ 80 ಶತಕಗಳನ್ನು ಬಾರಿಸಿದ್ದಾರೆ. ಹೀಗಾಗಿ 100 ಶತಕಗಳನ್ನು ಬಾರಿಸುವ ಅವಕಾಶ ಕಿಂಗ್ ಕೊಹ್ಲಿ ಮುಂದಿದೆ.
ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತ್ಯಧಿಕ ಶತಕ ಸಿಡಿಸಿದ ವಿಶ್ವ ದಾಖಲೆ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದೆ. 782 ಇನಿಂಗ್ಸ್ ಆಡಿರುವ ಮಾಸ್ಟರ್ ಬ್ಲಾಸ್ಟರ್ ಸಚಿನ್ ಒಟ್ಟು 100 ಶತಕ ಬಾರಿಸಿ ವಿಶ್ವ ದಾಖಲೆ ನಿರ್ಮಿಸಿಟ್ಟಿದ್ದಾರೆ. ಈ ದಾಖಲೆಯನ್ನು ಅಳಿಸಿ ಹಾಕಿ ವಿರಾಟ್ ಕೊಹ್ಲಿ ಹೊಸ ಇತಿಹಾಸ ಬರೆಯಲಿದ್ದಾರಾ ಕಾದು ನೋಡಬೇಕಿದೆ.