
ಸೂರತ್‌ನ ಖ್ಯಾತ ಮಾಡೆಲ್ ತಾನಿಯಾ ಸಿಂಗ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ಕ್ರಿಕೆಟ್‌ನ ಉದಯೋನ್ಮುಖ ತಾರೆ ಅಭಿಷೇಕ್ ಶರ್ಮಾಗೆ ಸೂರತ್ ಪೊಲೀಸರು ಸಮನ್ಸ್ ನೀಡಿದ್ದಾರೆ. ಐಪಿಎಲ್ ಸನಿಹವಾಗುತ್ತಿರುವ ಬೆನ್ನಲ್ಲೇ ಅಭಿಷೇಕ್ ಶರ್ಮಾಗೆ ಪೊಲೀಸರು ಸಮನ್ಸ್ ನೀಡಿರುವುದು ಸನ್‌ರೈಸರ್ಸ್ ಹೈದರಾಬಾದ್ ತಂಡದಲ್ಲಿ ಆತಂಕ ಮೂಡಿಸಿದೆ.

ವಾಸ್ತವವಾಗಿ, ಫೆಬ್ರವರಿ 19 ರಂದು ಗುಜರಾತ್‌ನ ಸೂರತ್‌ನಲ್ಲಿ ತಾನಿಯಾ ಸಿಂಗ್ ಎಂಬ 28 ವರ್ಷದ ಮಾಡೆಲ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಪ್ರಕರಣದಲ್ಲಿ ಪೊಲೀಸರು ಇದೀಗ ಅಭಿಷೇಕ್ ಶರ್ಮಾ ಅವರನ್ನು ವಿಚಾರಣೆಗೆ ಕರೆದಿದ್ದಾರೆ. ಐಪಿಎಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಪರ ಆಡುತ್ತಿರುವ ಈ ಸ್ಪಿನ್ ಬೌಲಿಂಗ್ ಆಲ್‌ರೌಂಡರ್, ಮಾಡೆಲ್‌ನೊಂದಿಗೆ ಸಂಪರ್ಕದಲ್ಲಿದ್ದರು ಎಂದು ವರದಿಯಾಗಿದೆ.

ಪಂಜಾಬ್ ಪರ ದೇಶೀಯ ಕ್ರಿಕೆಟ್ ಆಡುತ್ತಿರುವ ಅಭಿಷೇಕ್ ಶರ್ಮಾಗೆ ಆತ್ಮಹತ್ಯೆ ಮಾಡಿಕೊಂಡಿರುವ ತಾನಿಯಾ ಕೊನೆಯದಾಗಿ ಕರೆ ಮಾಡಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಹೀಗಾಗಿ ಅಭಿಷೇಕ್ ಅವರನ್ನು ಸೂರತ್ ಪೊಲೀಸರು ವಿಚಾರಣೆಗೆ ಕರೆದಿದ್ದು, ಈ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ.

ತಾನಿಯಾ, ಅಭಿಷೇಕ್ ಶರ್ಮಾ ಜೊತೆಗೆ ಸಂಪರ್ಕದಲ್ಲಿದ್ದರು ಎಂಬ ಸುದ್ದಿ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಆದರೆ ಕೆಲ ದಿನಗಳ ನಂತರ ಇಬ್ಬರ ನಡುವಿನ ಸಂವಹನ ಸ್ಥಗಿತಗೊಂಡಿದ್ದು, ಅಭಿಷೇಕ್ ಮತ್ತು ತಾನಿಯಾ ನಡುವಿನ ಸಂಬಂಧದ ಬಗ್ಗೆ ಮಾಹಿತಿ ಕಲೆಹಾಕುವ ಸಲುವಾಗಿ ಅಭಿಷೇಕ್ಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಭಿಷೇಕ್ ಶರ್ಮಾ ಮೊದಲ ಬಾರಿಗೆ ವಿನೂ ಮಂಕಡ್ ಟ್ರೋಫಿಯಲ್ಲಿ ಪಂಜಾಬ್ ಪರ 19 ವರ್ಷದೊಳಗಿನವರ ಚೊಚ್ಚಲ ಪಂದ್ಯದಲ್ಲಿ ಶತಕ ಬಾರಿಸುವ ಮೂಲಕ ಮುನ್ನಲೆಗೆ ಬಂದರು. ನಂತರ 2016 ರಲ್ಲಿ ಅಂಡರ್-19 ಏಷ್ಯಾ ಕಪ್‌ನಲ್ಲಿ ತಮ್ಮ ನಾಯಕತ್ವದಲ್ಲಿ ಭಾರತವನ್ನು ಗೆಲುವಿನತ್ತ ಮುನ್ನಡೆಸಿದ್ದರು.

2018 ರಲ್ಲಿ ನಡೆದ ಅಂಡರ್-19 ವಿಶ್ವಕಪ್ ಗೆದ್ದ ಭಾರತ ತಂಡದ ಅವಿಭಾಜ್ಯ ಅಂಗವಾಗಿದ್ದ ಅಭಿಷೇಕ್, ತಂಡ ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. 2018 ರಲ್ಲಿ ಮೊದಲ ಬಾರಿಗೆ ಐಪಿಎಲ್ ಅಖಾಡಕ್ಕಿಳಿದಿದ್ದ ಅಭಿಷೇಕ್‌ರನ್ನು ಡೆಲ್ಲಿ ಡೇರ್‌ಡೆವಿಲ್ಸ್ (ದೆಹಲಿ ಕ್ಯಾಪಿಟಲ್ಸ್) ಖರೀದಿಸಿತ್ತು.

ತಂಡದ ಪರ ಕೇವಲ ಮೂರು ಪಂದ್ಯಗಳಲ್ಲಿ ತಮ್ಮ ಸ್ಫೋಟಕ ಶೈಲಿಯನ್ನು ಪ್ರದರ್ಶಿಸುವ ಮೂಲಕ ಇತರ ಫ್ರಾಂಚೈಸಿಗಳ ಗಮನ ಸೆಳೆದಿದ್ದ ಅಭಿಷೇಕ್ ಮುಂದಿನ ವರ್ಷವೇ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಸೇರಿಕೊಂಡರು. ಅಂದಿನಿಂದ ಆರೆಂಜ್ ಆರ್ಮಿಯ ಭಾಗವಾಗಿರುವ ಅಭಿಷೇಕ್ ಇದುವರೆಗೆ ಐಪಿಎಲ್‌ನಲ್ಲಿ 47 ಪಂದ್ಯಗಳನ್ನಾಡಿದ್ದು, 137.83 ಸ್ಟ್ರೈಕ್ ರೇಟ್‌ನಲ್ಲಿ 893 ರನ್ ಕಲೆಹಾಕಿದ್ದಾರೆ.