
ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ದ ಸೋತ ಚೆನ್ನೈ ಸೂಪರ್ ಕಿಂಗ್ಸ್ ತಂಡ ಅಧಿಕೃತವಾಗಿ ಐಪಿಎಲ್ 2025 ರಿಂದ ಹೊರಗುಳಿದಿದೆ. ಈ ಸೀಸನ್‌ನಲ್ಲಿ ನಿರಾಶಾದಾಯಕ ಪ್ರದರ್ಶನ ನೀಡಿದ ಸಿಎಸ್‌ಕೆ ಆಡಿದ 10 ಪಂದ್ಯಗಳಲ್ಲಿ 2 ಪಂದ್ಯಗಳನ್ನು ಮಾತ್ರ ಗೆಲ್ಲಲು ಸಾಧ್ಯವಾಗಿದೆ. ಚೆನ್ನೈ ತಂಡದ ಈ ನಾಚಿಕೆಗೇಡಿನ ಪ್ರದರ್ಶನಕ್ಕೆ ಆಟಗಾರರ ಕಳಪೆ ಪ್ರದರ್ಶನವೇ ಕಾರಣವಾಗಿತ್ತು. ಹರಾಜಿನಲ್ಲಿ ಕೋಟಿ ಮೊತ್ತ ಪಡೆದಿದ್ದ ಆಟಗಾರರು ನಿರಸ ಪ್ರದರ್ಶನ ನೀಡಿದರು.

ಸಿಎಸ್‌ಕೆ ಫ್ರಾಂಚೈಸಿ ಯಾವ ಆಟಗಾರರ ಮೇಲೆ ಭರವಸೆ ಇಟ್ಟು ಅಧಿಕ ಮೊತ್ತ ನೀಡಿ ಖರೀದಿಸಿತ್ತೋ ಆ ಯಾವ ಆಟಗಾರನೂ ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ. ಇದರ ಪರಿಣಾಮವೆಂದರೆ ಸಿಎಸ್‌ಕೆ ತನ್ನ ಪ್ಲೇಯಿಂಗ್-11 ಅನ್ನು ಇಲ್ಲಿಯವರೆಗೆ ಸರಿಯಾಗಿ ನಿರ್ಧರಿಸಲು ಸಾಧ್ಯವಾಗಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಅನೇಕ ಆಟಗಾರರ ಮೇಲೆ ಕತ್ತಿ ನೇತಾಡುತ್ತಿದ್ದು, ಮುಂಬರುವ ಸೀಸನ್ಗೆ ತಂಡದಿಂದ ಕೆಲವು ಆಟಗಾರರಿಗೆ ಕೋಕ್ ನೀಡುವುದು ಖಚಿತವಾಗಿದೆ. ಅಂತಹ 6 ಆಟಗಾರರ ಪಟ್ಟಿ ಇಲ್ಲಿದೆ.

ಆರ್ ಅಶ್ವಿನ್ ಅವರನ್ನು ಖರೀದಿಸಲು ಚೆನ್ನೈ ಸೂಪರ್ ಕಿಂಗ್ಸ್ ಮೆಗಾ ಹರಾಜಿನಲ್ಲಿ 9.75 ಕೋಟಿ ರೂ.ಗಳನ್ನು ಖರ್ಚು ಮಾಡಿತು. ಆದರೆ ತಮ್ಮ ಅನುಭವಕ್ಕೆ ತಕ್ಕಂತೆ ಪ್ರದರ್ಶನ ನೀಡುವಲ್ಲಿ ವಿಫಲರಾದ ಅಶ್ವಿನ್ ಈ ಸೀಸನ್‌ನಲ್ಲಿ 9.29 ರ ಎಕಾನಮಿಯಲ್ಲಿ ರನ್ ನೀಡಿದ್ದು, 44.60 ಸರಾಸರಿಯಲ್ಲಿ ಕೇವಲ 5 ವಿಕೆಟ್‌ಗಳನ್ನು ಮಾತ್ರ ಪಡೆದಿದ್ದಾರೆ. ತಂಡಕ್ಕೆ ಅಗತ್ಯವಿದ್ದಾಗ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾದ ಅಶ್ವಿನ್ ಮುಂದಿನ ಸೀಸನ್ ಆಡುವುದು ಡೌಟ್.

ತಮ್ಮ ಪವರ್ ಹಿಟ್ಟಿಂಗ್ ಮೂಲಕ ಮಧ್ಯಮ ಕ್ರಮಾಂಕದ ಬ್ಯಾಟಿಂಗ್‌ಗೆ ಜೀವ ತುಂಬುವ ಸಲುವಾಗಿ ದೀಪಕ್ ಹೂಡಾ ಅವರನ್ನು ಸಿಎಸ್‌ಕೆ 1.7 ಕೋಟಿ ರೂ.ಗೆ ಖರೀದಿಸಿತ್ತು. ಆದರೆ ಐಪಿಎಲ್ 2025 ರಲ್ಲಿ ದೀಪಕ್ ಹೂಡಾ 75.61 ರ ಸ್ಟ್ರೈಕ್ ರೇಟ್‌ನಲ್ಲಿ ಆಡಿದ್ದ 5 ಇನ್ನಿಂಗ್ಸ್‌ಗಳಲ್ಲಿ ಕೇವಲ 6.20 ಸರಾಸರಿಯಲ್ಲಿ ಕೇವಲ 31 ರನ್ ಕಲೆಹಾಕಿದ್ದಾರೆ. ಹೂಡಾ ಅವರ ಈ ನಿರಸ ಪ್ರದರ್ಶನದಿಂದಾಗಿ ಚೆನ್ನೈ ತಂಡದ ಮಧ್ಯಮ ಕ್ರಮಾಂಕ ವಿಫಲವಾಯಿತು.

ಮಧ್ಯಮ ಕ್ರಮಾಂಕಕ್ಕಾಗಿಯೇ ಚೆನ್ನೈ ಸೂಪರ್ ಕಿಂಗ್ಸ್ ವಿಜಯ್ ಶಂಕರ್ ಅವರನ್ನು ಸಹ 1.2 ಕೋಟಿ ರೂ.ಗೆ ಖರೀದಿಸಿತು. ಆದರೆ ಅವರು ಕೂಡ ಆಡಿದ 6 ಪಂದ್ಯಗಳಲ್ಲಿ 39 ಸರಾಸರಿಯಲ್ಲಿ 118 ರನ್ ಗಳಿಸಿದ್ದಾರೆ. ಬ್ಯಾಟಿಂಗ್‌ನಲ್ಲಿ ಕೊಡುಗೆ ನೀಡುವಲ್ಲಿ ವಿಫಲರಾದ ಶಂಕರ್, ಇತ್ತ ತಮ್ಮ ನಿಧಾನಗತಿಯ ಬೌಲಿಂಗ್‌ನಿಂದಲೂ ತಂಡಕ್ಕೆ ಯಾವುದೇ ಪ್ರಯೋಜನ ನೀಡಲಿಲ್ಲ.

ಪವರ್‌ಪ್ಲೇನಲ್ಲಿ ಆಕ್ರಮಣಕಾರಿ ಬ್ಯಾಟಿಂಗ್‌ಗೆ ಹೆಸರುವಾಸಿಯಾಗಿರುವ ರಾಹುಲ್ ತ್ರಿಪಾಠಿ ಅವರನ್ನು ಸಿಎಸ್‌ಕೆ 3.4 ಕೋಟಿ ರೂ.ಗೆ ಖರೀದಿಸಿತ್ತು. ಅವರಿಗೆ ಐಪಿಎಲ್‌ನಲ್ಲೂ ಉತ್ತಮ ಅನುಭವವಿದೆ. ಆದರೆ ಈ ಸೀಸನ್‌ನಲ್ಲಿ ಅವರು ಅಗ್ರ ಕ್ರಮಾಂಕದಲ್ಲಿ ತಂಡಕ್ಕೆ ತ್ವರಿತ ಆರಂಭ ನೀಡುವಲ್ಲಿ ವಿಫಲರಾದರು. ಕೇವಲ 96.49 ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟಿಂಗ್ ಮಾಡಿದ ತ್ರಿಪಾಠಿ 11 ರ ಸರಾಸರಿಯಲ್ಲಿ ಆಡಿರುವ 57 ಎಸೆತಗಳಲ್ಲಿ 55 ರನ್ ಗಳಿಸಿದ್ದಾರೆ.

ವರ್ಷಗಳಿಂದ ಸಿಎಸ್‌ಕೆ ತಂಡದ ಭಾಗವಾಗಿರುವ ಡೆವೊನ್ ಕಾನ್ವೇ ಕೂಡ ಫಾರ್ಮ್‌ನಲ್ಲಿರುವಂತೆ ಕಾಣಲಿಲ್ಲ. ತುರ್ತು ಪರಿಸ್ಥಿತಿಯಿಂದಾಗಿ ಕಾನ್ವೇ ಪ್ರಸ್ತುತ ಮನೆಗೆ ಮರಳಿದ್ದಾರೆ. ಆದರೆ ಮನೆಗೆ ಹೋಗುವ ಮೊದಲು, ಅವರು ಆಡಿದ 3 ಪಂದ್ಯಗಳಲ್ಲಿ 94 ರನ್ ಗಳಿಸಿದರು. ಪವರ್‌ಪ್ಲೇನಲ್ಲಿ ಅವರ ನಿಧಾನಗತಿಯ ಇನ್ನಿಂಗ್ಸ್ ತಂಡಕ್ಕೆ ಭಾರಿ ನಷ್ಟವನ್ನುಂಟುಮಾಡಿದೆ. ಅಂತಹ ಪರಿಸ್ಥಿತಿಯಲ್ಲಿ, ಕಾನ್ವೇಯನ್ನು ಸಹ ತಂಡದಿಂದ ಬಿಡುಗಡೆ ಮಾಡಬಹುದು.

ಎಡಗೈ ವೇಗದ ಬೌಲರ್ ಮುಖೇಶ್ ಚೌಧರಿ ಕೂಡ ಸಾಕಷ್ಟು ರನ್‌ಗಳನ್ನು ಬಿಟ್ಟುಕೊಟ್ಟಿದ್ದಾರೆ. ಅವರ ಬೌಲಿಂಗ್, ವಿಶೇಷವಾಗಿ ಡೆತ್ ಓವರ್‌ಗಳಲ್ಲಿ, ತಂಡಕ್ಕೆ ಬಹಳಷ್ಟು ಹಾನಿಯನ್ನುಂಟುಮಾಡಿದೆ. ಕೊನೆಯ ಓವರ್‌ಗಳಲ್ಲಿ ಅವರ ಎಕಾನಮಿ 11.83 ಆಗಿದ್ದು, ಇದರಿಂದಾಗಿ ತಂಡವು ಅನೇಕ ಪಂದ್ಯಗಳನ್ನು ಸೋತಿದೆ. ಹೀಗಾಗಿ ಒತ್ತಡಕ್ಕೆ ಸಿಲುಕಿದ ಮುಖೇಶ್ ಯಾರ್ಕರ್ ಮತ್ತು ನಿಧಾನಗತಿಯ ಚೆಂಡುಗಳನ್ನು ಎಸೆಯುವಲ್ಲಿಯೂ ವಿಫಲರಾಗಿದ್ದಾರೆ.