- Kannada News Photo gallery Cricket photos Kannada News | CSK vs GT IPL 2023 Final Doubt even Today disastrous pre monsoon rain in Narendra Modi Stadium
CSK vs GT, IPL 2023 Rain: ರಣಭೀಕರ ಮಳೆಗೆ ತತ್ತರಿಸಿದ ನರೇಂದ್ರ ಮೋದಿ ಸ್ಟೇಡಿಯಂ: ಇಂದುಕೂಡ ಫೈನಲ್ ಅನುಮಾನ
Narendra Modi Stadium Rain: ಬೇಸರದ ಸಂಗತಿ ಎಂದರೆ ಐಪಿಎಲ್ 2023 ಫೈನಲ್ನ ಮೀಸಲು ದಿನವಾದ ಇಂದುಕೂಡ ಮಳೆ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ. ಸೋಮವಾರ ಸಂಜೆ ವೇಳೆಗೆ ಮಳೆ ಸುರಿಯಲಿದೆಯಂತೆ.
Updated on: May 29, 2023 | 7:20 AM

16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಭಾನುವಾರ ನಡೆಯಬೇಕಿದ್ದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟಾನ್ಸ್ ನಡುವಣ ಫೈನಲ್ ಪಂದ್ಯ ಮಳೆಗೆ ಕೊಚ್ಚಿ ಹೋಯಿತು. ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಸುರಿದ ರಣಭೀಕರ ಮಳೆಗೆ ಟಾಸ್ ಪ್ರಕ್ರಿಯೆ ಕೂಡ ನಡೆಸಲಾಗಿಲ್ಲ.

ಸದ್ಯ ಪಂದ್ಯವನ್ನು ಮೀಸಲು ದಿನವಾದ ಇಂದು ಸೋಮವಾರಕ್ಕೆ ಮುಂದೂಡಲಾಗಿದೆ. ರೋಚಕ ಕಾದಾಟ ವೀಕ್ಷಿಸಲು ಭಾನುವಾರ ಬಂದಿದ್ದ 1,32,000 ಪ್ರೇಕ್ಷಕರು ನಿರಾಸೆ ಅನುಭವಿಸಿದರು. ವಿಶೇಷ ಎಂದರೆ 16 ವರ್ಷಗಳ ಐಪಿಎಲ್ ಇತಿಹಾಸದಲ್ಲಿ ಫೈನಲ್ ಪಂದ್ಯ ಮೀಸಲು ದಿನದಂದು ನಡೆಯುತ್ತಿರುವುದು ಇದೇ ಪ್ರಥಮ ಬಾರಿ.

ಭಾನುವಾರ ರಾತ್ರಿ 7 ಗಂಟೆಗೆ ಟಾಸ್ ಪ್ರಕ್ರಿಯೆ ನಡೆಯಬೇಕಿತ್ತು. ಆದರೆ ಸಂಜೆ 6.30ರ ವೇಳೆಗೆ ಮಳೆರಾಯನ ಆಗಮನವಾಯಿತು. ಮೈದಾನ ಸಿಬ್ಬಂದಿಗಳು ಪಿಚ್‌ಗಳಿಗೆ ಹೊದಿಕೆ ಹಾಕಿದರು. 7 ಗಂಟೆ ಹೊತ್ತಿಗೆ ಗುಡುಗು ಮತ್ತು ಮಿಂಚು ಸಹಿತ ಮಳೆಯ ಆರ್ಭಟ ಹೆಚ್ಚಿದ್ದರಿಂದ ಕ್ರೀಡಾಂಗಣದಲ್ಲಿ ನೀರು ಹರಿಯಿತು.

ಪ್ರೇಕ್ಷಕರ ಗ್ಯಾಲರಿಯಲ್ಲಿದ್ದ ಅಭಿಮಾನಿಗಳು ಮಳೆಯಿಂದ ರಕ್ಷಿಸಿಕೊಳ್ಳಲು ಕಷ್ಟ ಪಡುತ್ತಿರುವುದು ಕಂಡುಬಂತು. ರಾತ್ರಿ 8.30 ಹೊತ್ತಿಗೆ ಮಳೆ ನಿಂತಿತು. ಅಂಪೈರ್‌ಗಳು ಮೈದಾನ ಪರಿಶೀಲಿಸಿ ಟಾಸ್ ಮಾಡುವ ನಿರ್ಧಾರ ತೆಗೆದುಕೊಂಡರು. ಇನ್ನೇನು ಟಾಸ್ ನಡೆಯುತ್ತೆ ಎಂಬೊತ್ತಿಗೆ ಪುನಃ ಮಳೆ ಸುರಿಯಲಾರಂಭಿಸಿತು.

ರಾತ್ರಿ ಸುಮಾರು 10.30ರವರೆಗೂ ಜೋರಾಗಿ ಮಳೆ ಮುಂದುವರಿಯಿತು. ಪಿಚ್‌ಗೆ ಹಾಕಿದ್ದ ಹೊದಿಕೆ ಮತ್ತು ಔಟ್‌ಫೀಲ್ಡ್‌ನಲ್ಲಿ ಸಾಕಷ್ಟು ನೀರು ನಿಂತಿತು. ಅಂತಿಮವಾಗಿ ರಾತ್ರಿ 10.55ರ ವೇಳೆಗೆ ಮ್ಯಾಚ್ ರೆಫರಿ ಜಾವಗಲ್ ಶ್ರೀನಾಥ್ ಮತ್ತು ಅಂಪೈರ್‌ಗಳು ಮಾತುಕತೆ ನಡೆಸಿ ಪಂದ್ಯವನ್ನು ಇಂದು ಸೋಮವಾರಕ್ಕೆ ಮುಂದೂಡಲು ನಿರ್ಧಾರ ಮಾಡಿದರು.

ಬೇಸರದ ಸಂಗತಿ ಎಂದರೆ ಮೀಸಲು ದಿನವಾದ ಇಂದುಕೂಡ ಮಳೆ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ. ಸೋಮವಾರ ಸಂಜೆ ವೇಳೆಗೆ ಮಳೆ ಸುರಿಯಲಿದೆಯಂತೆ. ದಿನಪೂರ್ತಿ ಮೋಡ ಕವಿದ ವಾತಾವರಣ ಇರುತ್ತದೆ ಎಂದು ವರದಿ ಹೇಳಿದೆ. ದೇಶದ ಪ್ರಸ್ತುತ ಹವಾಮಾನ ವರದಿ ಗಮನಿಸಿದರೆ, ಯಾವುದೇ ಸಮಯದಲ್ಲಿ ಮಳೆಯಾಗಬಹುದು.

ಒಂದು ವೇಳೆ ಇಂದಿನ ಪಂದ್ಯ ಕೂಡ ಮಳೆಯಿಂದ ಕೊಚ್ಚಿ ಹೋದರೆ ಲೀಗ್ ಹಂತದ ಪಾಯಿಂಟ್ಸ್ ಟೇಬಲ್ ಮೂಲಕ ಚಾಂಪಿಯನ್ ತಂಡವನ್ನು ನಿರ್ಧರಿಸಲಾಗುತ್ತದೆ. ಪಾಯಿಂಟ್ಸ್ ಟೇಬಲ್ನಲ್ಲಿ ಅಗ್ರಸ್ಥಾನ ಅಲಂಕರಿಸಿದ ಗುಜರಾತ್ ತಂಡವನ್ನು ಚಾಂಪಿಯನ್ ಎಂದು ಘೋಷಣೆ ಮಾಡಲಾಗುತ್ತದೆ.




