
ಅಬುಧಾಬಿಯ ಶೇಖ್ ಝಾಯೆದ್ ಸ್ಟೇಡಿಯಂನಲ್ಲಿ ನಡೆದ ಏಷ್ಯಾಕಪ್ನ 15ನೇ ಪಂದ್ಯದಲ್ಲಿ ಪಾಕಿಸ್ತಾನ್ ತಂಡ ಶ್ರೀಲಂಕಾ ವಿರುದ್ಧ ಸೋಲನುಭವಿಸಿದೆ. ಈ ಸೋಲಿನ ನಡುವೆ ಲಂಕಾ ತಂಡದ ಸ್ಟಾರ್ ಆಟಗಾರ ದಸುನ್ ಶಾನಕ (Dasun Shanaka) ಅನಗತ್ಯ ವಿಶ್ವ ದಾಖಲೆಯೊಂದನ್ನು ನಿರ್ಮಿಸಿದ್ದಾರೆ.

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ಪರ 6ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ದಸುನ್ ಶಾನಕ (0) ಮೊದಲ ಎಸೆತದಲ್ಲೇ ಔಟಾಗಿದ್ದರು. ಹೀಗೆ ಝೀರೋಗೆ ವಿಕೆಟ್ ಒಪ್ಪಿಸುವ ಮೂಲಕ ಲಂಕಾ ಬ್ಯಾಟರ್ ಟಿ20 ಕ್ರಿಕೆಟ್ನ ಡಕ್ಮ್ಯಾನ್ ಎನಿಸಿಕೊಂಡಿದ್ದಾರೆ.

ಅಂದರೆ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತೀ ಹೆಚ್ಚು ಬಾರಿ ಶೂನ್ಯಕ್ಕೆ ಔಟಾದ ಬ್ಯಾಟರ್ ಎಂಬ ಕಳಪೆ ದಾಖಲೆಯೊಂದು ದಸುನ್ ಶಾನಕ ಹೆಸರಿಗೆ ಸೇರ್ಪಡೆಯಾಗಿದೆ. ಇದಕ್ಕೂ ಮುನ್ನ ಈ ಬೇಡದ ವಿಶ್ವ ದಾಖಲೆ ಬಾಂಗ್ಲಾದೇಶ್ ತಂಡದ ಸೌಮ್ಯ ಸರ್ಕಾರ್ ಹಾಗೂ ಐರ್ಲೆಂಡ್ನ ಪಾಲ್ ಸ್ಟಿರ್ಲಿಂಗ್ ಹೆಸರಿನಲ್ಲಿತ್ತು.

ಬಾಂಗ್ಲಾದೇಶ್ ಪರ 86 ಟಿ20 ಇನಿಂಗ್ಸ್ ಆಡಿರುವ ಸೌಮ್ಯ ಸರ್ಕಾರ್ ಒಟ್ಟು 13 ಬಾರಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿ ಈ ಹೀನಾಯ ದಾಖಲೆ ಬರೆದಿದ್ದರು. ಇನ್ನು ಐರ್ಲೆಂಡ್ನ ಪಾಲ್ ಸ್ಟಿರ್ಲಿಂಗ್ 150 ಟಿ20 ಇನಿಂಗ್ಸ್ಗಳಲ್ಲಿ 13 ಬಾರಿ ರನ್ ಖಾತೆ ತೆರೆಯದೇ ವಿಕೆಟ್ ಒಪ್ಪಿಸಿದ್ದರು. ಈ ಮೂಲಕ ಸೌಮ್ಯ ಸರ್ಕಾರ್ ಹಾಗೂ ಪಾಲ್ ಸ್ಟಿರ್ಲಿಂಗ್ ಟಿ20 ಕ್ರಿಕೆಟ್ನ ಡಕ್ಮ್ಯಾನ್ ಎನಿಸಿಕೊಂಡಿದ್ದರು.

ಇದೀಗ ಈ ಹೀನಾಯ ದಾಖಲೆಯನ್ನು ದಸುನ್ ಶಾನಕ ತಮ್ಮದಾಗಿಸಿಕೊಂಡಿದ್ದಾರೆ. ಶ್ರೀಲಂಕಾ ಪರ 102 ಟಿ20 ಇನಿಂಗ್ಸ್ ಆಡಿರುವ ಶಾನಕ ಒಟ್ಟು 14 ಬಾರಿ ಡಕ್ ಔಟ್ ಆಗಿದ್ದಾರೆ. ಈ ಮೂಲಕ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತೀ ಹೆಚ್ಚು ಬಾರಿ ಸೊನ್ನೆ ಸುತ್ತಿದ ಬ್ಯಾಟರ್ ಎಂಬ ಬೇಡದ ವಿಶ್ವ ದಾಖಲೆಗೆ ಕೊರೊಳೊಡ್ಡಿದ್ದಾರೆ.