
ಅಂತರರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿ ಪ್ರಸ್ತುತ ವಿದೇಶಿ ಟಿ20 ಲೀಗ್ಗಳಲ್ಲಿ ಆಡುತ್ತಿರುವ ಆಸ್ಟ್ರೇಲಿಯಾದ ಮಾಜಿ ಆರಂಭಿಕ ಆಟಗಾರ ಡೇವಿಡ್ ವಾರ್ನರ್, ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ 2025-26ರ ಬಿಗ್ ಬ್ಯಾಷ್ ಲೀಗ್‌ನಲ್ಲಿ ಸಿಡ್ನಿ ಥಂಡರ್ ಪರ ಆಡುತ್ತಿದ್ದು, ಅಮೋಘ ಶತಕ ಸಿಡಿಸಿ ದಾಖಲೆ ಮುರಿದಿದ್ದಾರೆ.

ಸಿಡ್ನಿ ಥಂಡರ್ ಮತ್ತು ಹೋಬಾರ್ಟ್ ಹರಿಕೇನ್ಸ್ ನಡುವೆ ನಡೆದ ಬಿಬಿಎಲ್‌ನ 21 ನೇ ಪಂದ್ಯದಲ್ಲಿ ಡೇವಿಡ್ ವಾರ್ನರ್ ಟಿ20 ಕ್ರಿಕೆಟ್‌ನಲ್ಲಿ ತಮ್ಮ ಒಂಬತ್ತನೇ ಶತಕವನ್ನು ದಾಖಲಿಸಿದರು. ಈ ಶತಕದೊಂದಿಗೆ, ವಾರ್ನರ್ ಈಗ ಟಿ20 ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ಶತಕಗಳನ್ನು ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಜಂಟಿಯಾಗಿ ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ.

ಈ ಶತಕದೊಂದಿಗೆ ಡೇವಿಡ್ ವಾರ್ನರ್, ರೋಹಿತ್ ಶರ್ಮಾ ಅವರ ದಾಖಲೆಯನ್ನು ಮುರಿದಿದ್ದಾರೆ. ಈ ಪಂದ್ಯಕ್ಕೂ ಮುನ್ನ, ಡೇವಿಡ್ ವಾರ್ನರ್ ಮತ್ತು ರೋಹಿತ್ ಶರ್ಮಾ ತಲಾ 8 ಶತಕಗಳೊಂದಿಗೆ ಸಮಬಲ ಸಾಧಿಸಿದ್ದರು. ಆದರೆ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಶತಕ ಬಾರಿಸುವುದರೊಂದಿಗೆ ವಾರ್ನರ್, ರೋಹಿತ್ ಶರ್ಮಾ ಅವರನ್ನು ಮೀರಿಸಿದ್ದಾರೆ.

ಹಾಗೆಯೇ ವಾರ್ನರ್ ತಮ್ಮ ಒಂಬತ್ತನೇ ಶತಕದೊಂದಿಗೆ ವಿರಾಟ್ ಕೊಹ್ಲಿ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. ವಿರಾಟ್ ಕೊಹ್ಲಿ ಕೂಡ ಟಿ20 ಕ್ರಿಕೆಟ್‌ನಲ್ಲಿ 9 ಶತಕಗಳ ಇನ್ನಿಂಗ್ಸ್ ಆಡಿದ್ದಾರೆ. ಉತ್ತಮ ಫಾರ್ಮ್‌ನಲ್ಲಿರುವ 39 ವರ್ಷದ ವಾರ್ನರ್ 54 ಎಸೆತಗಳಲ್ಲಿ ತಮ್ಮ ಶತಕ ಪೂರೈಸಿದರು. ಅವರ ಈ ಅಜೇಯ ಇನ್ನಿಂಗ್ಸ್‌ನಲ್ಲಿ 8 ಸಿಕ್ಸರ್‌ಗಳು ಮತ್ತು 10 ಬೌಂಡರಿಗಳು ಸೇರಿದ್ದವು.

ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕಗಳನ್ನು ಗಳಿಸಿದ ದಾಖಲೆಯನ್ನು ಕ್ರಿಸ್ ಗೇಲ್ ಹೊಂದಿದ್ದು, ಕೆರಿಬಿಯನ್ ಸೂಪರ್ ಸ್ಟಾರ್ ಚುಟುಕು ಕ್ರಿಕೆಟ್‌ನಲ್ಲಿ 22 ಶತಕಗಳನ್ನು ಗಳಿಸಿದ್ದಾರೆ. ಇದು ಬಿಗ್ ಬ್ಯಾಷ್ ಲೀಗ್‌ನಲ್ಲಿ ಡೇವಿಡ್ ವಾರ್ನರ್ ಅವರ ಎರಡನೇ ಶತಕವಾಗಿದ್ದು, ಬರೋಬ್ಬರಿ ಆರು ವರ್ಷಗಳ ನಂತರ ವಾರ್ನರ್ ಮೊದಲ ಟಿ20 ಶತಕ ದಾಖಲಿಸಿದ್ದಾರೆ.