- Kannada News Photo gallery Cricket photos Bangladesh T20 World Cup History: Poor Performance and 2026 India Boycott Reason
ಬಿಸಿಸಿಐ ವಿರುದ್ಧ ತೊಡೆ ತಟ್ಟಿರುವ ಬಾಂಗ್ಲಾ ತಂಡದ ಟಿ20 ವಿಶ್ವಕಪ್ ಪ್ರದರ್ಶನ ಹೇಗಿದೆ?
Bangladesh T20 World Cup: ಬಾಂಗ್ಲಾದೇಶ 2026ರ ಟಿ20 ವಿಶ್ವಕಪ್‌ಗೆ ಭಾರತಕ್ಕೆ ತೆರಳದಿರಲು ನಿರ್ಧರಿಸಿದೆ. ಮುಸ್ತಾಫಿಜುರ್ ಐಪಿಎಲ್‌ನಿಂದ ಹೊರಹಾಕಿದ್ದೇ ಇದಕ್ಕೆ ಕಾರಣ. ತಂಡದ ಪಂದ್ಯಗಳನ್ನು ಶ್ರೀಲಂಕಾಕ್ಕೆ ಸ್ಥಳಾಂತರಿಸುವಂತೆ ಐಸಿಸಿಗೆ ವಿನಂತಿಸಿದೆ. ಬಾಂಗ್ಲಾ ತಂಡದ ಟಿ20 ವಿಶ್ವಕಪ್ ಪ್ರದರ್ಶನ ಐತಿಹಾಸಿಕವಾಗಿ ಕಳಪೆ. ಇದುವರೆಗೆ ಸೆಮಿಫೈನಲ್ ತಲುಪಿಲ್ಲ.
Updated on: Jan 04, 2026 | 7:22 PM

ಫೆಬ್ರವರಿ 7 ರಿಂದ ಪ್ರಾರಂಭವಾಗುವ 2026 ರ ಟಿ20 ವಿಶ್ವಕಪ್‌ಗಾಗಿ ಬಾಂಗ್ಲಾದೇಶ ತನ್ನ ತಂಡವನ್ನು ಭಾರತಕ್ಕೆ ಕಳುಹಿಸದಿರಲು ನಿರ್ಧರಿಸಿದೆ. ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ತನ್ನ ತಂಡವನ್ನು ಭಾರತಕ್ಕೆ ಕಳುಹಿಸದಿರುವ ಬಗ್ಗೆ ಐಸಿಸಿಗೆ ಪತ್ರ ಬರೆದಿದ್ದು ತಂಡದ ಪಂದ್ಯಗಳನ್ನು ಭಾರತದಿಂದ ಶ್ರೀಲಂಕಾಕ್ಕೆ ಸ್ಥಳಾಂತರಿಸುವಂತೆ ವಿನಂತಿಸಿದೆ. ಮುಸ್ತಾಫಿಜುರ್ ರೆಹಮಾನ್ರನ್ನು ಐಪಿಎಲ್‌ನಿಂದ ಹೊರಹಾಕಿದ್ದು, ಬಿಸಿಬಿಯ ಈ ನಿರ್ಧಾರಕ್ಕೆ ಕಾರಣವಾಗಿದೆ.

ಬಾಂಗ್ಲಾ ಕ್ರಿಕೆಟ್ ಮಂಡಳಿಯ ಈ ನಿರ್ಧಾರದಿಂದ ಬಿಸಿಸಿಐಗೆ ನಷ್ಟವಾಗಲಿದೆಯಾ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ. ಆದರೆ ಅದಕ್ಕೆ ಉತ್ತರ ಇಲ್ಲ. ಏಕೆಂದರೆ ಚುಟುಕು ಮಾದರಿಯಲ್ಲಿ ಬಾಂಗ್ಲಾ ತಂಡದ ಪ್ರದರ್ಶನ ಅಷ್ಟಕಷ್ಟೆ. ಟಿ20 ವಿಶ್ವಕಪ್ನ ಮೊದಲ ಆವೃತ್ತಿಯಿಂದಲೂ ಪಾಲ್ಗೊಳ್ಳುತ್ತಿರುವ ಬಾಂಗ್ಲಾ ತಂಡಕ್ಕೆ ಇದುವರೆಗೆ ಒಂದೇ ಒಂದು ಆವೃತ್ತಿಯಲ್ಲಿ ಫೈನಲ್ ಬಿಡಿ, ಸೆಮಿಫೈನಲ್ ತಲುಪಲು ಸಾಧ್ಯವಾಗಿಲ್ಲ.

ಟಿ20 ವಿಶ್ವಕಪ್ನಲ್ಲಿ ಸರಾಸರಿ ಪ್ರದರ್ಶನ ನೀಡಿರುವ ಬಾಂಗ್ಲಾದೇಶ ತಂಡವು ಯಾವ ಆವೃತ್ತಿಯಲ್ಲೂ ನಾಕೌಟ್ ಹಂತವನ್ನು ತಲುಪಿಲ್ಲ. ಆದಾಗ್ಯೂ 2007 ರಲ್ಲಿ ನಡೆದ ಉದ್ಘಾಟನಾ ಆವೃತ್ತಿಯಲ್ಲಿ ಬಾಂಗ್ಲಾದೇಶ, ವೆಸ್ಟ್ ಇಂಡೀಸ್ ತಂಡವನ್ನು ಸೋಲಿಸಿ ಸೂಪರ್ 8 ಸುತ್ತನ್ನು ಪ್ರವೇಶಿಸುವ ಮೂಲಕ ಸಂಚಲನ ಮೂಡಿಸಿತ್ತು. ಆದರೆ ಈ ಸುತ್ತಿನಲ್ಲಿ ನಡೆದ ಮೂರು ಪಂದ್ಯಗಳಲ್ಲಿಯೂ ಸೋತಿತು.

ಆ ಬಳಿಕ 2009, 2010 ಮತ್ತು 2012 ರಲ್ಲಿ ನಡೆದ ನಂತರದ ಆವೃತ್ತಿಗಳಲ್ಲೂ ಬಾಂಗ್ಲಾ ತಂಡ ನಿರಾಶಾದಾಯಕ ಪ್ರದರ್ಶನ ನೀಡಿತು, ಗುಂಪು ಹಂತದಲ್ಲಿ ಒಂದೇ ಒಂದು ಗೆಲುವು ದಾಖಲಿಸಲು ವಿಫಲವಾಯಿತು. 2014 ಮತ್ತು 2016 ರಲ್ಲಿ ಸೂಪರ್ 10 ಸುತ್ತಿಗೆ ಅರ್ಹತೆ ಪಡೆಯುವಲ್ಲಿ ಯಶಸ್ವಿಯಾಗಿದ್ದ ಬಾಂಗ್ಲಾ, ಈ ಸುತ್ತಿನಲ್ಲಿ ಸತತ ಸೋಲುಗಳನ್ನು ಅನುಭವಿಸಿತು.

2021, 2022 ಮತ್ತು 2024 ರ ಟಿ20 ವಿಶ್ವಕಪ್‌ನಲ್ಲಿಯೂ ಬಾಂಗ್ಲಾ ತಂಡದ ಪ್ರದರ್ಶನ ವಿಶೇಷವಾಗಿರಲಿಲ್ಲ. ಆದಾಗ್ಯೂ ಬಾಂಗ್ಲಾ ತಂಡವು ಪ್ರತಿ ವರ್ಷ ಸೂಪರ್ 8 ಮತ್ತು ಸೂಪರ್ 10 ಹಂತಗಳನ್ನು ತಲುಪಿದೆ. ಆದರೆ ಸೆಮಿಫೈನಲ್ಗೆ ಅರ್ಹತೆ ಪಡೆಯುವಲ್ಲಿ ವಿಫಲವಾಗಿದೆ. ಇದೀಗ 2026 ರ ವಿಶ್ವಕಪ್ನಲ್ಲಿ ಬಾಂಗ್ಲಾ ತಂಡದ ಪ್ರದರ್ಶನ ಹೇಗಿರಲಿದೆ ಎಂಬುದನ್ನು ಕಾದುನೋಡಬೇಕಿದೆ.
