
ಕಳೆದ ಐಪಿಎಲ್‌ನಲ್ಲಿ ಆರ್ಸಿಬಿ ಪರ ಆಡಿದ್ದ ಕೆಲವೇ ಕೆಲವು ಇನ್ನಿಂಗ್ಸ್‌ಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಕನ್ನಡಿಗ ದೇವದತ್ ಪಡಿಕ್ಕಲ್, ಇದೀಗ ದೇಶಿ ಅಂಗಳದಲ್ಲಿ ಶತಕಗಳ ಮಳೆ ಸುರಿಸುತ್ತಿದ್ದಾರೆ. ವಿಜಯ್ ಹಜಾರೆ ಟ್ರೋಫಿಯ ಮೊದಲ ಪಂದ್ಯದಲ್ಲಿ 147 ರನ್ಗಳ ಗೆಲುವಿನ ಇನ್ನಿಂಗ್ಸ್ ಆಡಿದ್ದ ಪಡಿಕ್ಕಲ್, ಕರ್ನಾಟಕ ತಂಡ ದಾಖಲೆಯ ಮೊತ್ತವನ್ನು ಬೆನ್ನಟ್ಟುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.

ಇದೀಗ ಈ ಟೂರ್ನಿಯ ಎರಡನೇ ಪಂದ್ಯದಲ್ಲೂ ಮಿಂಚಿರುವ ದೇವದತ್ ಸತತ ಎರಡನೇ ಶತಕ ಸಿಡಿಸಿದ್ದಾರೆ. ಜಾರ್ಖಂಡ್ ವಿರುದ್ಧದ ಮೊದಲ ಪಂದ್ಯದಲ್ಲಿ ಕೇವಲ 118 ಎಸೆತಗಳಲ್ಲಿ 147 ರನ್ ಬಾರಿಸಿದ್ದ ಪಡಿಕ್ಕಲ್ ಇದೀಗ ಕೇರಳ ವಿರುದ್ಧದ ಪಂದ್ಯದಲ್ಲಿ 116 ಎಸೆತಗಳಲ್ಲಿ ಶತಕ ಪೂರೈಸಿದ್ದಾರೆ. ಕೇರಳ ವಿರುದ್ಧದ ಈ ಪಂದ್ಯದಲ್ಲಿ 137 ಎಸೆತಗಳನ್ನು ಎದುರಿಸಿದ ಪಡಿಕ್ಕಲ್ 3 ಸಿಕ್ಸರ್‌ಗಳು ಮತ್ತು 12 ಬೌಂಡರಿಗಳ ಸಹಿತ 124 ರನ್ ಬಾರಿಸಿದ್ದಾರೆ.

ದೇವದತ್ ಪಡಿಕ್ಕಲ್ ಇಷ್ಟೊಂದು ಉತ್ತಮ ಫಾರ್ಮ್‌ನಲ್ಲಿರುವುದು ಇದೇ ಮೊದಲಲ್ಲ. ಈ ಎಡಗೈ ಬ್ಯಾಟ್ಸ್‌ಮನ್ ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಭಾರತದ ಅತ್ಯುತ್ತಮ ಬ್ಯಾಟ್ಸ್‌ಮನ್ ಎಂಬುದನ್ನು ಅವರ ಅಂಕಿ ಅಂಶಗಳೇ ಹೇಳುತ್ತವೆ. ಪಡಿಕ್ಕಲ್ ಕೇವಲ 34 ಇನ್ನಿಂಗ್ಸ್‌ಗಳಲ್ಲಿ 11 ಶತಕಗಳು ಮತ್ತು 12 ಅರ್ಧಶತಕಗಳನ್ನು ಸಿಡಿಸಿದ್ದಾರೆ. ಇದರರ್ಥ ಅವರು ಬಹುತೇಕ ಎಲ್ಲಾ ಪಂದ್ಯಗಳಲ್ಲಿ ಶತಕ ಅಥವಾ ಅರ್ಧಶತಕದ ಇನ್ನಿಂಗ್ಸ್ ಆಡಿದ್ದಾರೆ.

ಲಿಸ್ಟ್ ಎ ಕ್ರಿಕೆಟ್‌ನಲ್ಲಿ 34 ಇನ್ನಿಂಗ್ಸ್‌ಗಳನ್ನಾಡಿರುವ ಪಡಿಕ್ಕಲ್ 82 ಕ್ಕಿಂತ ಹೆಚ್ಚು ಸರಾಸರಿಯಲ್ಲಿ 2342 ರನ್ ಗಳಿಸಿದ್ದಾರೆ. ಪಡಿಕ್ಕಲ್ ಅವರ ಸ್ಟ್ರೈಕ್ ರೇಟ್ ಕೂಡ 92 ಕ್ಕಿಂತ ಹೆಚ್ಚಾಗಿದೆ. ಈ ರೀತಿಯ ಅಂಕಿಅಂಶಗಳ ಹೊರತಾಗಿಯೂ, ಪಡಿಕ್ಕಲ್‌ಗೆ ಟೀಂ ಇಂಡಿಯಾ ಏಕದಿನ ತಂಡದಲ್ಲಿ ಆಡುವ ಅವಕಾಶ ಸಿಕ್ಕಿಲ್ಲ.

ಪಡಿಕ್ಕಲ್ ಇಲ್ಲಿಯವರೆಗೆ ಭಾರತ ತಂಡದ ಪರ ಎರಡು ಟೆಸ್ಟ್ ಮತ್ತು ಎರಡು ಟಿ20 ಪಂದ್ಯಗಳನ್ನು ಆಡಿದ್ದಾರೆ. ಟೆಸ್ಟ್‌ನಲ್ಲಿ ಒಂದು ಅರ್ಧಶತಕ ಸೇರಿದಂತೆ 30 ಸರಾಸರಿಯಲ್ಲಿ 90 ರನ್ ಗಳಿಸಿರುವ ಪಡಿಕ್ಕಲ್ ಟಿ20ಯಲ್ಲಿ 19 ರ ಸರಾಸರಿಯಲ್ಲಿ 38 ರನ್ ಗಳಿಸಿದ್ದಾರೆ. ಆದಾಗ್ಯೂ ಪಡಿಕ್ಕಲ್ ಅವರಿಗೆ ಇನ್ನೂ ಪೂರ್ಣ ಅವಕಾಶ ಸಿಕ್ಕಿಲ್ಲ ಎಂಬುದು ಸ್ಪಷ್ಟವಾಗಿದೆ.

2025 ರ ವರ್ಷ ದೇವದತ್ ಪಡಿಕ್ಕಲ್ ಅವರಿಗೆ ವಿಶೇಷವಾಗಿತ್ತು. ಕಳೆದ ಆವೃತ್ತಿಯ ವಿಜಯ್ ಹಜಾರೆ ಟ್ರೋಫಿಯ ಕ್ವಾರ್ಟರ್-ಫೈನಲ್ ಮತ್ತು ಸೆಮಿಫೈನಲ್‌ಗಳಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಗೆದ್ದಿದ್ದ ಪಡಿಕ್ಕಲ್, ಸೈಯದ್ ಮುಷ್ತಾಕ್ ಟ್ರೋಫಿಯಲ್ಲಿ 309 ರನ್ ಬಾರಿಸಿದ್ದರು, ಈಗ ವಿಜಯ್ ಹಜಾರೆ ಟ್ರೋಫಿಯಲ್ಲಿ ತಮ್ಮ ಸಾಮರ್ಥ್ಯವನ್ನು ಮತ್ತೊಮ್ಮೆ ಸಾಭೀತುಪಡಿಸಿರುವ ಪಡಿಕ್ಕಲ್‌ಗೆ ಭಾರತ ತಂಡದಲ್ಲಿ ಯಾವಾಗ ಅವಕಾಶ ಸಿಗಲಿದೆ ಎಂಬುದು ಅಭಿಮಾನಿಗಳ ಪ್ರಶ್ನೆಯಾಗಿದೆ.
Published On - 6:20 pm, Fri, 26 December 25