
ಐಪಿಎಲ್ 2024 ರ ಎಲಿಮಿನೇಟರ್ ಪಂದ್ಯದ ಮೂಲಕ ನಿವೃತ್ತಿ ಘೋಷಿಸಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ವಿಕೆಟ್ ಕೀಪರ್ ಬ್ಯಾಟರ್ ದಿನೇಶ್ ಕಾರ್ತಿಕ್ (Dinesh Karthik) ಮತ್ತೆ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಆದರೆ ಈ ಬಾರಿ ಐಪಿಎಲ್ನಲ್ಲಿ ಅಲ್ಲ ಎಂಬುದಷ್ಟೇ ವ್ಯತ್ಯಾಸ.

ಅಂದರೆ ದಿನೇಶ್ ಕಾರ್ತಿಕ್ ಸೌತ್ ಆಫ್ರಿಕಾ ಟಿ20 ಲೀಗ್ನಲ್ಲಿ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಮುಂಬರುವ SA20 ಲೀಗ್ನಲ್ಲಿ ಪಾಲ್ಗೊಳ್ಳಲು ಡಿಕೆ ನಿರ್ಧರಿಸಿದ್ದು, ಅದರಂತೆ ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿ ಮಾಲೀಕತ್ವದ ಪಾರ್ಲ್ ರಾಯಲ್ಸ್ ಪರ ಕಾರ್ತಿಕ್ ಮತ್ತೆ ಬ್ಯಾಟ್ ಬೀಸಲಿದ್ದಾರೆ.

ಐಪಿಎಲ್ ಸೀಸನ್-17ರ ಮೂಲಕ ಎಲ್ಲಾ ಮಾದರಿಯ ಕ್ರಿಕೆಟ್ಗೆ ವಿದಾಯ ಘೋಷಿಸಿದ್ದ ದಿನೇಶ್ ಕಾರ್ತಿಕ್ ಅವರನ್ನು ಕೆಲ ತಿಂಗಳ ಹಿಂದೆಯಷ್ಟೇ ಆರ್ಸಿಬಿ ಬ್ಯಾಟಿಂಗ್ ಕೋಚ್ ಆಗಿ ನೇಮಕ ಮಾಡಿತ್ತು. ಇದರ ಬೆನ್ನಲ್ಲೇ ಸೌತ್ ಆಫ್ರಿಕಾ ಕ್ರಿಕೆಟ್ ಬೋರ್ಡ್ ಅವರನ್ನು SA20 ಲೀಗ್ ಬ್ರಾಂಡ್ ಅಂಬಾಸಿಡರ್ ಆಗಿ ಆಯ್ಕೆ ಮಾಡಿಕೊಂಡಿತ್ತು.

ಅತ್ತ ಸೌತ್ ಆಫ್ರಿಕಾ ಟಿ20 ಲೀಗ್ನ ರಾಯಭಾರಿಯಾದ ಬೆನ್ನಲ್ಲೇ ಡಿಕೆ ಅವರನ್ನು ಮನವೊಲಿಸುವಲ್ಲಿ ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿ ಯಶಸ್ವಿಯಾಗಿದೆ. ಅದರಂತೆ ಇದೀಗ ಪಾರ್ಲ್ ರಾಯಲ್ಸ್ ಪರ ಕಣಕ್ಕಿಳಿಯಲು ಒಪ್ಪಂದ ಮಾಡಿಕೊಂಡಿದ್ದು, ಮುಂಬರುವ ಸೀಸನ್ನಲ್ಲಿ ಪಿಂಕ್ ಜೆರ್ಸಿಯಲ್ಲಿ ದಿನೇಶ್ ಕಾರ್ತಿಕ್ ಕಾಣಿಸಿಕೊಳ್ಳಲಿದ್ದಾರೆ.

17 ವರ್ಷಗಳ ಐಪಿಎಲ್ ಕೆರಿಯರ್ನಲ್ಲಿ ದಿನೇಶ್ ಕಾರ್ತಿಕ್ ಒಟ್ಟು 6 ತಂಡಗಳ ಪರ ಕಣಕ್ಕಿಳಿದಿದ್ದಾರೆ. ಈ ವೇಳೆ 2013 ರಲ್ಲಿ ಮುಂಬೈ ಇಂಡಿಯನ್ಸ್ ಪರ ಅವರು ಟ್ರೋಫಿ ಗೆದ್ದಿದ್ದರು. ಹಾಗೆಯೇ ಡೆಲ್ಲಿ ಕ್ಯಾಪಿಟಲ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಪಂಜಾಬ್ ಕಿಂಗ್ಸ್, ಗುಜರಾತ್ ಲಯನ್ಸ್ (ಈಗಿಲ್ಲ), ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳ ಪರ ಆಡಿದ್ದರು.

ಇದಾಗ್ಯೂ ಅವರು ರಾಜಸ್ಥಾನ್ ರಾಯಲ್ಸ್ ತಂಡದ ಪರ ಆಡಿರಲಿಲ್ಲ. ಇದೀಗ ಸೌತ್ ಆಫ್ರಿಕಾ ಟಿ20 ಲೀಗ್ ಮೂಲಕ ದಿನೇಶ್ ಕಾರ್ತಿಕ್ ಪಿಂಕ್ ಜೆರ್ಸಿ ತಂಡದ ಭಾಗವಾಗುತ್ತಿದ್ದಾರೆ. ಅಂದರೆ ಆರ್ಸಿಬಿ ತಂಡದ ಬ್ಯಾಟಿಂಗ್ ಕೋಚ್/ಮೆಂಟರ್ ಆಗಿ ಕಾರ್ಯ ನಿರ್ವಹಿಸಲಿರುವ ಡಿಕೆ ಸೌತ್ ಆಫ್ರಿಕಾದಲ್ಲಿ ವಿಕೆಟ್ ಕೀಪರ್ ಬ್ಯಾಟರ್ ಆಗಿ ಕಣಕ್ಕಿಳಿಯಲಿರುವುದು ವಿಶೇಷ.