ಟೀಂ ಇಂಡಿಯಾದ ಮಾಜಿ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್ ಈ ವರ್ಷದ ಐಪಿಎಲ್ ಅಂತ್ಯದೊಂದಿಗೆ ಎಲ್ಲಾ ಮಾದರಿಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದರು. ಆದರೆ ಇದೀಗ ತಮ್ಮ ನಿರ್ಧಾರದಿಂದ ಹಿಂದೆ ಸರಿದಿರುವ ಡಿಕೆ ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ಎಸ್‌ಎ ಟಿ20 ಲೀಗ್‌ನಲ್ಲಿ ಮತ್ತೊಮ್ಮೆ ಅಖಾಡಕ್ಕಿಳಿಯಲು ಸಜ್ಜಾಗಿದ್ದಾರೆ.
ಎಸ್‌ಎ ಟಿ20 ಲೀಗ್‌ನಲ್ಲಿ ರಾಜಸ್ಥಾನ ರಾಯಲ್ಸ್‌ನ ಫ್ರಾಂಚೈಸ್ ತಂಡವಾದ ಪಾರ್ಲ್ ರಾಯಲ್ಸ್ ಪರ ಇದೇ ಮೊದಲ ಬಾರಿಗೆ ದಿನೇಶ್ ಕಾರ್ತಿಕ್ ಈ ಲೀಗ್‌ನಲ್ಲಿ ಆಡಲಿದ್ದಾರೆ. ಆದರೆ ಅದಕ್ಕೂ ಮುನ್ನ ದಕ್ಷಿಣ ಆಫ್ರಿಕಾದಲ್ಲಿ ದಿನೇಶ್ ಕಾರ್ತಿಕ್ ಅನುಭವಿಸಿದ್ದ ಅದೊಂದು ಅಚ್ಚರಿಯ ಅನುಭವವದ ಸ್ವಾರಸ್ಯಕರ ಘಟನೆಯನ್ನು ಇದೀಗ ಎಲ್ಲರ ಮುಂದೆ ಹಂಚಿಕೊಂಡಿದ್ದಾರೆ.
ವಾಸ್ತವವಾಗಿ ದಿನೇಶ್ ಕಾರ್ತಿಕ್ ರಾಷ್ಟ್ರೀಯ ತಂಡದ ಭಾಗವಾಗಿದ್ದಾಗ 2013 ರಲ್ಲಿ ತಂಡದೊಂದಿಗೆ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಿದ್ದರು. ಈ ಪ್ರವಾಸದಲ್ಲಿ ಭಾರತ ತ್ರಿಕೋನ ಸರಣಿ ಆಡಬೇಕಾಗಿತ್ತು. ಈ ಸರಣಿಯಲ್ಲಿ ದಕ್ಷಿಣ ಆಫ್ರಿಕಾ ಹಾಗೂ ಆಸ್ಟ್ರೇಲಿಯಾ ತಂಡಗಳು ಭಾಗಿಯಾಗಿದ್ದವು. ಈ ಸರಣಿಯ ವೇಳೆ ಕಾರ್ತಿಕ್ಗೆ ಆದ ಅದೊಂದು ಅನುಭವ ಈಗ ಜಗಜ್ಜಾಹೀರಾಗಿದೆ.
ಮೇಲೆ ಹೇಳಿದಂತೆ 2013ರಲ್ಲಿ ತಂಡದೊಂದಿಗೆ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಿದ್ದ ಕಾರ್ತಿಕ್, ತಮ್ಮ ಕೋಣೆಯಲ್ಲಿ ಅತಿಮಾನುಷ ಶಕ್ತಿಯ ಚಲನೆಯ ಅನುಭವವನ್ನು ಎದುರಿಸಿದ್ದರಂತೆ. ಈ ಬಗ್ಗೆ ಹೇಳಿಕೊಂಡಿರುವ ಕಾರ್ತಿಕ್, ನಾನು ರಾತ್ರಿಯಲ್ಲಿ ಕೋಣೆಯಲ್ಲಿ ಮಲಗಿರುವಾಗ ನನ್ನ ಕೋಣೆಯಲ್ಲಿ ಅಗೋಚರ ಶಕ್ತಿ ಓಡಾಡಿದ ಅನುಭವವನ್ನು ಅನುಭವಿಸಿದ್ದೆ. ಆದರೆ ಆ ರಾತ್ರಿ ನಾನು ನಿಖರವಾಗಿ ಏನನ್ನು ನೋಡಿದೆ ಎಂಬುದು ನನಗೆ ತಿಳಿದಿಲ್ಲ ಎಂದು ಡಿಕೆ ಹೇಳಿದ್ದಾರೆ.
ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಆ ಭಯಾನಕ ರಾತ್ರಿಯನ್ನು ಕಳೆದಿದ್ದ ಕಾರ್ತಿಕ್ ಇದೀಗ ಮತ್ತೊಮ್ಮೆ ದಕ್ಷಿಣ ಆಫ್ರಿಕಾದಲ್ಲಿ ಆಡಲು ರೆಡಿಯಾಗಿದ್ದಾರೆ. SA20 ಲೀಗ್‌ನಲ್ಲಿ ರಾಯಲ್ಸ್ ಪರ ಆಡುತ್ತಿರುವ ಡಿಕೆ ಇದರೊಂದಿಗೆ ಈ ಲೀಗ್‌ನಲ್ಲಿ ಆಡಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.
ದಿನೇಶ್ ಕಾರ್ತಿಕ್ ತಮ್ಮ ಅಂತರಾಷ್ಟ್ರೀಯ ವೃತ್ತಿಜೀವನದಲ್ಲಿ ಒಟ್ಟು 26 ಟೆಸ್ಟ್, 94 ಏಕದಿನ ಮತ್ತು 60 ಟಿ20 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಇದಲ್ಲದೆ, ಅವರು 167 ಪ್ರಥಮ ದರ್ಜೆ ಪಂದ್ಯಗಳನ್ನು, 260 ಲಿಸ್ಟ್ ಎ ಮತ್ತು 401 ಟಿ20 ಪಂದ್ಯಗಳನ್ನು ಆಡಿದ್ದಾರೆ. ಕಾರ್ತಿಕ್ ಟೆಸ್ಟ್ನಲ್ಲಿ 1025 ರನ್, ಏಕದಿನದಲ್ಲಿ 1752 ರನ್‌ಗಳನ್ನು ಸಿಡಿಸಿದರೆ, ಟಿ20ಯಲ್ಲಿ 686 ರನ್ ಗಳಿಸಿದ್ದರು.
ಇನ್ನು ಪ್ರಥಮ ದರ್ಜೆ ವೃತ್ತಿಜೀವನದಲ್ಲಿ 28 ಶತಕ ಮತ್ತು ಲಿಸ್ಟ್ ಎ ಕ್ರಿಕೆಟ್‌ನಲ್ಲಿ 12 ಶತಕಗಳನ್ನು ಗಳಿಸಿದ್ದಾರೆ. ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕೇವಲ ಒಂದು ಶತಕವನ್ನು ಬಾರಿಸಿರುವ ಕಾರ್ತಿಕ್, 2007 ರ ಟಿ20 ವಿಶ್ವಕಪ್ ಮತ್ತು 2013 ರ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದ ತಂಡದ ಭಾಗವಾಗಿದ್ದರು ಎಂಬುದು ವಿಶೇಷ ಸಂಗತಿಯಾಗಿದೆ.