Updated on:Aug 12, 2022 | 8:31 AM
ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡದ ಮಾಜಿ ಆಲ್ರೌಂಡರ್ ಹಾಗೂ ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಆಡುವ ಡ್ವೇನ್ ಬ್ರಾವೋ ಟಿ20 ಕ್ರಿಕೆಟ್ ನಲ್ಲಿ ಹೊಸ ಮೈಲಿಗಲ್ಲು ತಲುಪಿದ್ದಾರೆ. 38 ವರ್ಷದ ಬ್ರಾವೋ ಟಿ20 ಮಾದರಿಯ ಕ್ರಿಕೆಟ್ ನಲ್ಲಿ ಬರೋಬ್ಬರಿ 600 ವಿಕೆಟ್ ಕಿತ್ತ ಮೊದಲ ಆಟಗಾರ ಎಂಬ ಐತಿಹಾಸಿಕ ಸಾಧನೆ ಮಾಡಿದ್ದಾರೆ.
ಬ್ರಾವೋ ಸದ್ಯ ಇಂಗ್ಲೆಂಡ್ ನಲ್ಲಿ ನಡೆಯುತ್ತಿರುವ ದಿ ಹಂಡ್ರೆಡ್ ಕ್ರಿಕೆಟ್ ಟೂರ್ನಿಯಲ್ಲಿ ನಾರ್ಥನ್ ಸೂಪರ್ ಚಾರ್ಜರ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಇಲ್ಲಿ ಓವಲ್ ಇನ್ವಿಸಿಬಲ್ಸ್ ತಂಡದ ಬ್ಯಾಟರ್ ರಿಲೀ ರೊಸ್ಸೊ ಅವರನ್ನು ಔಟ್ ಮಾಡುವ ಮೂಲಕ ಚುಟುಕು ಕ್ರಿಕೆಟ್ ನಲ್ಲಿ 600ನೇ ವಿಕೆಟ್ ಪಡೆದುಕೊಂಡರು.
ಈ ಮೂಲಕ ಟಿ20 ಮಾದರಿಯ ಕ್ರಿಕೆಟ್ ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದು ಇದುವರೆಗೆ ಯಾರೂ ಮಾಡಿರದ ಸಾಧನೆ ಗೈದಿದ್ದಾರೆ. ಈ ಪಟ್ಟಿಯ ಎರಡನೇ ಸ್ಥಾನದಲ್ಲಿ ಅಫ್ಘಾನಿಸ್ತಾನ ತಂಡದ ಸ್ಪಿನ್ನರ್ ರಶೀದ್ ಖಾನ್ ಅವರಿದ್ದು, ಇವರು 466 ವಿಕೆಟ್ ಗಳನ್ನು ಕಬಳಿಸಿದ್ದಾರೆ.
ಟಿ20 ಮಾದರಿಯ ಕ್ರಿಕೆಟ್ ನಲ್ಲಿ ಬ್ರಾವೋ ಅವರು ಇದುವರೆಗೆ ಬರೋಬ್ಬರಿ 25 ತಂಡಗಳ ಪರ ಕಣಕ್ಕಿಳಿದಿದ್ದಾರೆ. 2006, ಫೆಬ್ರವರಿ 16 ರಂದು ನ್ಯೂಜಿಲೆಂಡ್ ವಿರುದ್ಧ ಟಿ20 ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ ಇವರು ವೆಸ್ಟ್ ಇಂಡೀಸ್ ಪರ 91 ಪಂದ್ಯಗಳಿಂದ 78 ವಿಕೆಟ್ ಪಡೆದುಕೊಂಡಿದ್ದಾರೆ.
ವೆಸ್ಟ್ ಇಂಡೀಸ್ 2012 ಮತ್ತು 2016 ರಲ್ಲಿ ಟಿ20 ವಿಶ್ವಕಪ್ ಪ್ರಶಸ್ತಿ ಗೆದ್ದಾಗ ತಂಡವನ್ನು ಪ್ರತಿನಿಧಿಸಿದ್ದರು. ಕಳೆದ ವರ್ಷ 2021 ಟಿ20 ವಿಶ್ವಕಪ್ ಮುಗಿದ ಬಳಿಕ ಬ್ರಾವೋ ನಿವೃತ್ತಿ ಘೋಷಿಸಿದ್ದರು. ಐಪಿಎಲ್ ನಲ್ಲಿ ಕೂಡ ಬ್ರಾವೋ ಕಮಾಲ್ ಮಾಡಿದ್ದು 161 ಪಂದ್ಯಗಳಿಂದ 183 ವಿಕೆಟ್ ಕಿತ್ತಿದ್ದಾರೆ.
Published On - 8:31 am, Fri, 12 August 22