ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆದ ಟೀಮ್ ಇಂಡಿಯಾ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಆಸ್ಟ್ರೇಲಿಯಾ ಆಟಗಾರ್ತಿ ಎಲ್ಲಿಸ್ ಪೆರ್ರಿ ವಿಶೇಷ ದಾಖಲೆ ಬರೆದಿದ್ದಾರೆ. ಅದು ಕೂಡ ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ನಲ್ಲಿ ಇದುವರೆಗೆ ಯಾರು ಬರೆಯದ ದಾಖಲೆ ಎಂಬುದು ವಿಶೇಷ.
ಈ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಆಸ್ಟ್ರೇಲಿಯಾ ಪರ 300 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಎಲ್ಲಿಸ್ ಪೆರ್ರಿ ಪಾತ್ರರಾಗಿದ್ದಾರೆ. ಅಲ್ಲದೆ ಈ ಸಾಧನೆ ಮಾಡಿದ ವಿಶ್ವದ 4ನೇ ಮಹಿಳಾ ಕ್ರಿಕೆಟರ್ ಎನಿಸಿಕೊಂಡಿದ್ದಾರೆ.
ಇದಕ್ಕೂ ಮುನ್ನ ಭಾರತದ ಮಿಥಾಲಿ ರಾಜ್ (333), ಇಂಗ್ಲೆಂಡ್‌ನ ಚಾರ್ಲೊಟ್ ಎಡ್ವರ್ಡ್ಸ್ (309), ಮತ್ತು ನ್ಯೂಝಿಜಿಲೆಂಡ್‌ನ ಸುಜಿ ಬೇಟ್ಸ್ (309) ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 300 ಪಂದ್ಯಗಳನ್ನಾಡಿದ್ದರು. ಇದೀಗ ಈ ವಿಶೇಷ ಸಾಧಕರ ಪಟ್ಟಿಗೆ ಎಲ್ಲಿಸ್ ಪೆರ್ರಿ ಕೂಡ ಸೇರ್ಪಡೆಯಾಗಿದ್ದಾರೆ.
2008 ರಿಂದ ಆಸ್ಟ್ರೇಲಿಯಾ ಪರ ಆಡುತ್ತಿರುವ ಎಲ್ಲಿಸ್ ಪೆರ್ರಿ ಇದೀಗ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 15 ವರ್ಷಗಳನ್ನು ಪೂರೈಸಿದ್ದಾರೆ. ಈ ಹದಿನೈದು ವರ್ಷಗಳಲ್ಲಿ 300 ಪಂದ್ಯಗಳನ್ನಾಡುವ ಮೂಲಕ ಆಸೀಸ್ ಪರ ವಿಶೇಷ ಸಾಧನೆ ಮಾಡಿದ ಮೊದಲ ಮಹಿಳಾ ಆಟಗಾರ್ತಿ ಎನಿಸಿಕೊಂಡಿದ್ದಾರೆ.
ಆಸ್ಟ್ರೇಲಿಯಾ ಪರ 147 ಟಿ20 ಪಂದ್ಯಗಳನ್ನಾಡಿರುವ ಎಲ್ಲಿಸ್ 1808 ರನ್ ಕಲೆಹಾಕಿದ್ದಾರೆ. ಹಾಗೆಯೇ 123 ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು 141 ಏಕದಿನ ಪಂದ್ಯಗಳಿಂದ 3852 ರನ್ ಹಾಗೂ 162 ವಿಕೆಟ್ ಪಡೆದಿದ್ದಾರೆ. ಇನ್ನು 12 ಟೆಸ್ಟ್ ಪಂದ್ಯಗಳಿಂದ 925 ರನ್ ಹಾಗೂ 38 ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆಸ್ಟ್ರೇಲಿಯಾ ತಂಡಕ್ಕೆ ಜಯ: ಮುಂಬೈನಲ್ಲಿ ನಡೆದ ಟೀಮ್ ಇಂಡಿಯಾ ವಿರುದ್ಧದ 2ನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 8 ವಿಕೆಟ್ ಕಳೆದುಕೊಂಡು 130 ರನ್ ಕಲೆಹಾಕಿತು. ಈ ಸುಲಭ ಟಾರ್ಗೆಟ್ ಬೆನ್ನತ್ತಿದ ಆಸ್ಟ್ರೇಲಿಯಾ 19 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿದೆ. ಈ ಮೂಲಕ 6 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.