ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ ಮುಂಬೈ ಇಂಡಿಯನ್ಸ್ (MI) ವಿರುದ್ಧದ ಎಲಿಮಿನೇಟರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು 5 ರನ್ಗಳ ರೋಚಕ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಆರ್ಸಿಬಿ ತಂಡವು ಫೈನಲ್ಗೆ ಪ್ರವೇಶಿಸಿದೆ.
ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಆರ್ಸಿಬಿ ಬ್ಯಾಟರ್ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ. ಇದಾಗ್ಯೂ ಏಕಾಂಗಿಯಾಗಿ ಹೋರಾಡಿದ ಎಲ್ಲಿಸ್ ಪೆರ್ರಿ 50 ಎಸೆತಗಳಲ್ಲಿ 8 ಫೋರ್ ಹಾಗೂ 1 ಸಿಕ್ಸ್ನೊಂದಿಗೆ 66 ರನ್ಗಳ ಕೊಡುಗೆ ನೀಡಿದರು.
ಈ ಮೂಲಕ ಆರ್ಸಿಬಿ ತಂಡ 135 ರನ್ ಕಲೆಹಾಕುವಲ್ಲಿ ಪೆರ್ರಿ ಪ್ರಮುಖ ಪಾತ್ರವಹಿಸಿದ್ದರು. ಈ ಗುರಿಯನ್ನು ಬೆನ್ನತ್ತಿದ ಮುಂಬೈ ಇಂಡಿಯನ್ಸ್ 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 130 ರನ್ಗಳಿಸಲಷ್ಟೇ ಶಕ್ತಾರಾದರು. ಈ ಮೂಲಕ ಆರ್ಸಿಬಿ 5 ವಿಕೆಟ್ಗಳ ಜಯ ಸಾಧಿಸಿದೆ.
ಈ ಪಂದ್ಯದಲ್ಲಿ ಅರ್ಧಶತಕದ ಜೊತೆಗೆ 1 ವಿಕೆಟ್ ಕಬಳಿಸಿ ಮಿಂಚಿದ್ದ ಎಲ್ಲಿಸ್ ಪೆರ್ರಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ವಿಶೇಷ ಎಂದರೆ ಈ ಪಂದ್ಯದಲ್ಲಿ ಬಾರಿಸಿದ 60 ರನ್ಗಳೊಂದಿಗೆ ಪೆರ್ರಿ ವುಮೆನ್ಸ್ ಪ್ರೀಮಿಯರ್ ಲೀಗ್ನಲ್ಲಿ 500+ ರನ್ ಕಲೆಹಾಕಿದ ಮೊದಲ ಆರ್ಸಿಬಿ ಬ್ಯಾಟರ್ ಎನಿಸಿಕೊಂಡಿದ್ದಾರೆ.
ಆರ್ಸಿಬಿ ಪರ ಇದುವರೆಗೆ 16 ಇನಿಂಗ್ಸ್ ಆಡಿರುವ ಎಲ್ಲಿಸ್ ಪೆರ್ರಿ 565 ರನ್ಗಳನ್ನು ಕಲೆಹಾಕಿದ್ದಾರೆ. ಈ ಮೂಲಕ ವುಮೆನ್ಸ್ ಪ್ರೀಮಿಯರ್ ಲೀಗ್ನಲ್ಲಿ ಆರ್ಸಿಬಿ ಪರ ಅತ್ಯಧಿಕ ರನ್ ಕಲೆಹಾಕಿದ ಬ್ಯಾಟರ್ ಎಂಬ ದಾಖಲೆ ಬರೆದಿದ್ದಾರೆ. ಇದರ ಜೊತೆಗೆ WPL ನಲ್ಲಿ ಅತೀ ಹೆಚ್ಚು ರನ್ ಬಾರಿಸಿದ 2ನೇ ಆಟಗಾರ್ತಿ ಎನಿಸಿಕೊಂಡಿದ್ದಾರೆ.
ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವುದು ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕಿ ಮೆಗ್ ಲ್ಯಾನಿಂಗ್. ವುಮೆನ್ಸ್ ಪ್ರೀಮಿಯರ್ ಲೀಗ್ನಲ್ಲಿ ಒಟ್ಟು 17 ಇನಿಂಗ್ಸ್ ಆಡಿರುವ ಲ್ಯಾನಿಂಗ್ 653 ರನ್ ಕಲೆಹಾಕಿ ಈ ದಾಖಲೆ ನಿರ್ಮಿಸಿದ್ದಾರೆ. ಇದೀಗ 565 ರನ್ ಕಲೆಹಾಕಿರುವ ಎಲ್ಲಿಸ್ ಪೆರ್ರಿ ಫೈನಲ್ ಪಂದ್ಯದಲ್ಲಿ 89 ರನ್ ಸಿಡಿಸಿದರೆ ಅಗ್ರಸ್ಥಾನಕ್ಕೇರಬಹುದು.
Published On - 6:52 am, Sat, 16 March 24