ಇಂಗ್ಲೆಂಡ್ ಕ್ರಿಕೆಟ್‌ನಲ್ಲಿ ಒಂದು ವಾರದೊಳಗೆ ಇಬ್ಬರು ಅನುಭವಿ ಆಟಗಾರರು ನಿವೃತ್ತಿ ಘೋಷಿಸುವ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಆಶಸ್ ಸರಣಿಯ ಕೊನೆಯ ಟೆಸ್ಟ್‌ನೊಂದಿಗೆ, ಇಂಗ್ಲೆಂಡ್‌ನ ಶ್ರೇಷ್ಠ ವೇಗದ ಬೌಲರ್‌ಗಳಲ್ಲಿ ಒಬ್ಬರಾದ ಸ್ಟುವರ್ಟ್ ಬ್ರಾಡ್ ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದರು.
ಬ್ರಾಡ್ ನಿವೃತ್ತಿ ಘೋಷಿಸಿದ 6 ದಿನಗಳ ಬಳಿಕ ಇಂಗ್ಲೆಂಡ್‌ನ ಸ್ಫೋಟಕ ಬ್ಯಾಟ್ಸ್ಮನ್ ಅಲೆಕ್ಸ್ ಹೇಲ್ಸ್ ಕೂಡ ಅಂತರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ. ಕಳೆದ ವರ್ಷದ ಟಿ20 ವಿಶ್ವಕಪ್‌ನ ಫೈನಲ್ನಲ್ಲಿ ಇಂಗ್ಲೆಂಡ್ ಪರ ಆಡಿದ್ದ ಹೇಲ್ಸ್, ಇಂಗ್ಲೆಂಡ್ ತಂಡವನ್ನು ವಿಶ್ವ ಚಾಂಪಿಯನ್ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇದರಲ್ಲಿ ಭಾರತದ ವಿರುದ್ಧದ ಸೆಮಿಫೈನಲ್‌ನಲ್ಲಿ ಸ್ಫೋಟಕ ಇನ್ನಿಂಗ್ಸ್ ಕೂಡ ತುಂಬಾ ವಿಶೇಷವಾಗಿತ್ತು.
ಸ್ಫೋಟಕ ಬ್ಯಾಟಿಂಗ್ ಮತ್ತು ವಿವಾದಗಳಿಂದಲೇ ಸಾಕಷ್ಟು ಚರ್ಚೆಗೊಳಗಾಗಿದ್ದ 34 ವರ್ಷದ ಹೇಲ್ಸ್ ಶುಕ್ರವಾರ, ಆಗಸ್ಟ್ 4 ರಂದು ಹೇಳಿಕೆ ನೀಡುವ ಮೂಲಕ ನಿವೃತ್ತಿ ಘೋಷಿಸಿದ್ದಾರೆ. ‘ಎಲ್ಲಾ ಮೂರು ಸ್ವರೂಪಗಳಲ್ಲಿ ಇಂಗ್ಲೆಂಡ್ ತಂಡವನ್ನು ಪ್ರತಿನಿಧಿಸಿ 156 ಪಂದ್ಯಗಳಲ್ಲಿ ಕಾಣಿಸಿಕೊಂಡಿರುವುದು ನನಗೆ ಸಿಕ್ಕ ಶ್ರೇಷ್ಠ ಗೌರವವೆಂದು ಹೇಲ್ಸ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇನ್ನು ಡ್ರಗ್ಸ್ ಕೇಸ್ನಲ್ಲಿ ಸಿಕ್ಕಿಬಿದ್ದಿದ್ದ ಹೇಲ್ಸ್ರನ್ನು 2019 ರ ವಿಶ್ವಕಪ್‌ಗೆ ಮುನ್ನ ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯು ಅಮಾನತುಗೊಳಿಸಿತ್ತು. ಇದರಿಂದಾಗಿ ತವರಿನಲ್ಲಿ ನಡೆದ ವಿಶ್ವಕಪ್ನಲ್ಲಿ ಹೇಲ್ಸ್ ಆಡಲಾಗಲಿಲ್ಲ. ಇದರಿಂದಾಗಿ ಹೇಲ್ಸ್, ಸುಮಾರು ನಾಲ್ಕು ವರ್ಷಗಳ ಕಾಲ ತಂಡದಿಂದ ಹೊರಗುಳಿಯಬೇಕಾಯ್ತು.
ಆದರೆ ಕಳೆದ ವರ್ಷ ಟಿ20 ವಿಶ್ವಕಪ್‌ಗೆ ಮುಂಚೆಯೇ, ತಂಡಕ್ಕೆ ಮರಳಿದ ಹೇಲ್ಸ್ ಪಂದ್ಯಾವಳಿಯ 6 ಇನ್ನಿಂಗ್ಸ್‌ಗಳಲ್ಲಿ 212 ರನ್ ಸಿಡಿಸಿದರು. ಇದರಲ್ಲಿ ಎರಡು ಅರ್ಧ ಶತಕಗಳು ಸೇರಿದ್ದವು. ಇದರಲ್ಲಿ, ಭಾರತ ವಿರುದ್ಧದ ಸೆಮಿಫೈನಲ್‌ನಲ್ಲಿ 86 ರನ್‌ಗಳ ಅಜೇಯ ಇನ್ನಿಂಗ್ಸ್ ಅವರ ದೊಡ್ಡ ಸ್ಕೋರ್ ಆಗಿತ್ತು. ಅದರ ಆಧಾರದ ಮೇಲೆ ಇಂಗ್ಲೆಂಡ್ 10 ವಿಕೆಟ್‌ಗಳಿಂದ ಭಾರತವನ್ನು ಮಣಿಸಿತ್ತು.
2011 ರಲ್ಲಿ ಇಂಗ್ಲೆಂಡ್ ಪರ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ಹೇಲ್ಸ್, ವೇಗದ ಬ್ಯಾಟಿಂಗ್‌ನೊಂದಿಗೆ ವಿಶೇಷ ಛಾಪು ಮೂಡಿಸಿದರು. ನಂತರ 2014ರಲ್ಲಿ ಏಕದಿನ ಹಾಗೂ 2015ರಲ್ಲಿ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ. ಅವರ ಆಕ್ರಮಣಕಾರಿ ವರ್ತನೆಯು ಟೆಸ್ಟ್ ಕ್ರಿಕೆಟ್‌ನಲ್ಲಿ ಯಶಸ್ವಿಯಾಗಲಿಲ್ಲ. ಆದರೆ ವೈಟ್ ಬಾಲ್ ಕ್ರಿಕೆಟ್‌ನಲ್ಲಿ ಹೇಲ್ಸ್ ತಮ್ಮ ಸಾಮರ್ಥ್ಯವನ್ನು ಸಾಭೀತುಪಡಿಸಿದರು.
ಒಟ್ಟಾರೆಯಾಗಿ, ಹೇಲ್ಸ್ 11 ಟೆಸ್ಟ್, 70 ಏಕದಿನ ಮತ್ತು 75 ಟಿ20 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ ಅವರು ಕ್ರಮವಾಗಿ 573 ರನ್, 2419 ರನ್ ಮತ್ತು 2074 ರನ್ ಕಲೆಹಾಕಿದ್ದಾರೆ. ಅವರು ಏಕದಿನ ಮತ್ತು ಟಿ20ಯಲ್ಲಿ ಒಟ್ಟು 7 ಶತಕಗಳನ್ನು ಸಿಡಿಸಿದ್ದಾರೆ.