- Kannada News Photo gallery Cricket photos Smriti Mandhana smashes another half century and Becomes 1st Player To Score 500 Runs In Women's Hundred
Smriti Mandhana: ದಿ ಹಂಡ್ರೆಡ್‌ನಲ್ಲಿ ಈ ದಾಖಲೆ ಬರೆದ ಮೊದಲ ಮಹಿಳಾ ಆಟಗಾರ್ತಿ ಸ್ಮೃತಿ ಮಂಧಾನ..!
Smriti Mandhana:
Updated on: Aug 05, 2023 | 8:09 AM

ಪ್ರಸ್ತುತ ಇಂಗ್ಲೆಂಡ್ನಲ್ಲಿ ನಡೆಯುತ್ತಿರುವ ದಿ ಹಂಡ್ರೆಡ್ ಮಹಿಳಾ ಕ್ರಿಕೆಟ್ ಲೀಗ್ನಲ್ಲಿ ಟೀಂ ಇಂಡಿಯಾದ ಸ್ಟಾರ್ ಓಪನರ್ ಮತ್ತು ವೈಟ್-ಬಾಲ್ ತಂಡದ ಉಪನಾಯಕಿ ಸ್ಮೃತಿ ಮಂಧಾನ ಶುಕ್ರವಾರ ನಡೆದ ವೆಲ್ಸ್ ಫೈರ್ ವಿರುದ್ಧದ ಪಂದ್ಯದಲ್ಲಿ ದಾಖಲೆಯೊಂದನ್ನು ಬರೆದಿದ್ದಾರೆ.

100 ಎಸೆತಗಳಲ್ಲಿ ಈ ಪಂದ್ಯಾವಳಿಯಲ್ಲಿ ಸದರ್ನ್ ಬ್ರೇವ್ ಪರ ಆಡುವ 27 ವರ್ಷದ ಎಡಗೈ ಬ್ಯಾಟರ್ ಸ್ಮೃತಿ, ಈ ಮಹಿಳಾ ಪಂದ್ಯಾವಳಿಯಲ್ಲಿ 500 ರನ್ ಕಲೆಹಾಕಿದ ಮೊದಲ ಆಟಗಾರ್ತಿ ಎಂಬ ಇತಿಹಾಸ ಸೃಷ್ಟಿಸಿದ್ದಾರೆ.

ಸತತ ಮೂರನೇ ಆವೃತ್ತಿಯಲ್ಲಿ ಬ್ರೇವ್ ತಂಡವನ್ನು ಪ್ರತಿನಿಧಿಸುತ್ತಿರುವ ಮಂಧಾನ, ಇದುವರೆಗೆ ಆಡಿರುವ 17 ಪಂದ್ಯಗಳಲ್ಲಿ ಒಟ್ಟು 503 ರನ್ ಗಳಿಸಿದ್ದಾರೆ. ಪ್ರಸ್ತುತ ನಡೆಯುತ್ತಿರುವ 2023 ರ ಆವೃತ್ತಿಯಲ್ಲಿ ಎರಡು ಬ್ಯಾಕ್-ಟು-ಬ್ಯಾಕ್ ಅರ್ಧಶತಕಗಳೊಂದಿಗೆ ಸ್ಮೃತಿ 78 ಎಸೆತಗಳಲ್ಲಿ 125 ರನ್ ಸಿಡಿಸಿ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

ಇನ್ನು 2022 ರ ಆವೃತ್ತಿಯಲ್ಲಿ ಎಂಟು ಪಂದ್ಯಗಳನ್ನಾಡಿದ್ದ ಸ್ಮೃತಿ 139 ಎಸೆತಗಳನ್ನು ಎದುರಿಸಿ ಒಟ್ಟು 211 ರನ್ ಕಲೆಹಾಕಿದ್ದರು.

ಹಾಗೆಯೇ 2021 ರ ಆವೃತ್ತಿಯಲ್ಲೂ 125 ಎಸೆತಗಳಲ್ಲಿ ಒಟ್ಟು 167 ರನ್ ಸಿಡಿಸಿದ್ದರು. ಸ್ಮೃತಿ ಹೊರತಾಗಿ ಮಹಿಳಾ ದಿ ಹಂಡ್ರೆಂಡ್ ಲೀಗ್ನಲ್ಲಿ ಮತ್ತ್ಯಾವ ಆಟಗಾರ್ತಿಯೂ 500 ರನ್ಗಳ ದಾಖಲೆ ಬರೆದಿಲ್ಲ ಎಂಬುದು ವಿಶೇಷ.

ದಿ ಹಂಡ್ರೆಡ್‌ನಲ್ಲಿ 500 ರನ್ ಗಳಿಸಿದ ಮೊದಲ ಆಟಗಾರ್ತಿ ಎಂಬ ದಾಖಲೆಯ ಜೊತೆಗೆ, ಮಂಧಾನ ಸ್ಪರ್ಧೆಯ ಇತಿಹಾಸದಲ್ಲಿ ಐದು ಅರ್ಧ ಶತಕಗಳನ್ನು ಸಿಡಿಸಿದ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಇನ್ನು ವೆಲ್ಸ್ ಫೈರ್ ತಂಡದ ವಿರುದ್ಧ ಅರ್ಧಶತಕ ಸಿಡಿಸಿದ ಸ್ಮೃತಿ ಅತಿ ಹೆಚ್ಚು ಅರ್ಧಶತಕ ಸಿಡಿಸಿದ ಆಟಗಾರ್ತಿಯರ ಪೈಕಿ 4 ಅರ್ಧಶತಕ ಸಿಡಿಸಿದ್ದ ಭಾರತ ತಂಡದ ಸಹ ಆಟಗಾರ್ತಿ ಜೆಮಿಮಾ ರೋಡ್ರಿಗಸ್ ಅವರ ದಾಖಲೆಯನ್ನು ಮುರಿದರು.

ಇನ್ನು ಸದರ್ನ್ ಬ್ರೇವ್ ಮತ್ತು ವೆಲ್ಸ್ ಫೈರ್ ತಂಡಗಳ ನಡುವಣ ಪಂದ್ಯದ ವಿಚಾರಕ್ಕೆ ಬರುವುದಾದರೆ, ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ವೆಲ್ಸ್ ಫೈರ್ ತಂಡ 100 ಎಸೆತಗಳಲ್ಲಿ 165 ರನ್ ಕಲೆಹಾಕಿತು. ತಂಡದ ಪರ ಹೇಲಿ ಮ್ಯಾಥ್ಯೂಸ್ 38 ಎಸೆತಗಳಲ್ಲಿ 65 ರನ್ ಬಾರಿಸಿದರು.

ಇನ್ನು 166 ರನ್ಗಳ ಗುರಿ ಬೆನ್ನಟ್ಟಿದ ಸದರ್ನ್ ಬ್ರೇವ್ ತಂಡ ಸ್ಮೃತಿ ಅವರ ಅಜೇಯ 70 ರನ್ ಹಾಗೂ ಡ್ಯಾನಿ ವ್ಯಾಟ್ ಅವರ 67 ರನ್ಗಳ ಇನ್ನಿಂಗ್ಸ್ನ ಹೊರತಾಗಿಯೂ ಅಂತಿಮವಾಗಿ 161 ರನ್ ಕಲೆಹಾಕಿ 5 ರನ್ಗಳಿಂದ ಸೋಲೊಪ್ಪೊಕೊಂಡಿತು.



















