ಭಾರತದ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡ 106 ರನ್ಗಳಿಂದ ಸೋಲನುಭವಿಸಿದೆ. ವಿಶಾಖಪಟ್ಟಣಂನಲ್ಲಿ ನಡೆದ ಈ ಪಂದ್ಯದ ನಾಲ್ಕನೇ ಇನಿಂಗ್ಸ್ನಲ್ಲಿ ಟೀಮ್ ಇಂಡಿಯಾ ಇಂಗ್ಲೆಂಡ್ಗೆ 399 ರನ್ಗಳ ಗುರಿ ನೀಡಿತ್ತು.
ಈ ಕಠಿಣ ಗುರಿಯನ್ನು ಬೆನ್ನತ್ತಿದ ಇಂಗ್ಲೆಂಡ್ ತಂಡವು ಉತ್ತಮ ಆರಂಭ ಪಡೆಯಿತು. ಆದರೆ ಮಧ್ಯಮ ಕ್ರಮಾಂಕದ ಬ್ಯಾಟರ್ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ. ಪರಿಣಾಮ ಇಂಗ್ಲೆಂಡ್ ತಂಡವು 292 ರನ್ಗಳಿಗೆ ಸರ್ವಪತನ ಕಂಡಿತು. ಇದರೊಂದಿಗೆ ಟೀಮ್ ಇಂಡಿಯಾ 106 ರನ್ಗಳ ಭರ್ಜರಿ ಜಯ ಸಾಧಿಸಿ ಸರಣಿಯನ್ನು 1-1 ಅಂತರದಿಂದ ಸಮಗೊಳಿಸಿದೆ.
ವಿಶೇಷ ಎಂದರೆ ಈ ಸೋಲಿನ ಹೊರತಾಗಿಯೂ ಇಂಗ್ಲೆಂಡ್ ತಂಡ ಬಾಝ್ಬಾಲ್ ಭಾರತದಲ್ಲಿ ಮತ್ತೊಮ್ಮೆ ಯಶಸ್ವಿಯಾಗಿದೆ. ಇದಕ್ಕೆ ಸಾಕ್ಷಿಯೇ 292 ರನ್ಗಳೊಂದಿಗೆ ಇಂಗ್ಲೆಂಡ್ ಹೊಸ ದಾಖಲೆ ಬರೆದಿರುವುದು.
ಅಂದರೆ ಭಾರತದಲ್ಲಿ ಇಂಗ್ಲೆಂಡ್ ತಂಡ ನಾಲ್ಕನೇ ಇನ್ನಿಂಗ್ಸ್ನಲ್ಲಿ ಯಾವತ್ತೂ 250 ರನ್ಗಳ ಗಡಿದಾಟಿರಲಿಲ್ಲ. ಈ ಹಿಂದೆ 1964 ರಲ್ಲಿ 241 ರನ್ಗಳಿಸಿದ್ದು ಅತ್ಯುತ್ತಮ ಸಾಧನೆಯಾಗಿತ್ತು. ಆದರೆ ಈ ಬಾರಿ ಆಂಗ್ಲರು ನಾಲ್ಕನೇ ಇನಿಂಗ್ಸ್ನಲ್ಲಿ ಅದ್ಭುತ ಪ್ರದರ್ಶನ ನೀಡಿದೆ. ಈ ಮೂಲಕ 60 ವರ್ಷಗಳ ಹಳೆಯ ದಾಖಲೆಯನ್ನೇ ಅಳಿಸಿ ಹಾಕಿದೆ.
ಟೆಸ್ಟ್ ಕ್ರಿಕೆಟ್ನಲ್ಲಿ ಆಕ್ರಮಣಕಾರಿ ಆಟದೊಂದಿಗೆ ಮಿಂಚುತ್ತಿರುವ ಇಂಗ್ಲೆಂಡ್ ತಂಡವು ಭಾರತದ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲೂ ಅದೇ ಬಾಝ್ಬಾಲ್ ಪ್ರದರ್ಶನ ನೀಡಿದೆ. ಈ ಪ್ರದರ್ಶನದ ಫಲವಾಗಿ ಇದೀಗ 60 ವರ್ಷಗಳ ಬಳಿಕ ಇಂಗ್ಲೆಂಡ್ ತಂಡವು 292 ರನ್ಗಳಿಸಿದೆ. ಈ ಸೋಲಿನ ಹೊರತಾಗಿ ವಿಶೇಷ ದಾಖಲೆ ಬರೆಯುವಲ್ಲಿ ಯಶಸ್ವಿಯಾಗಿದೆ.
ಅಷ್ಟೇ ಅಲ್ಲದೆ ಇದು ನಾಲ್ಕನೇ ಇನಿಂಗ್ಸ್ನಲ್ಲಿ ಪ್ರವಾಸಿ ತಂಡವೊಂದು ಭಾರತ ವಿರುದ್ಧ ಕಲೆಹಾಕಿದ 2ನೇ ಅತ್ಯುತ್ತಮ ಸ್ಕೋರ್. ಇದಕ್ಕೂ ಮುನ್ನ 2017 ರಲ್ಲಿ ಶ್ರೀಲಂಕಾ ತಂಡ 299 ರನ್ ಕಲೆಹಾಕುವಲ್ಲಿ ಯಶಸ್ವಿಯಾಗಿತ್ತು. ಇದೀಗ ಏಷ್ಯಾ ತಂಡದ ಹೊರತಾಗಿಯೂ ಇಂಗ್ಲೆಂಡ್ ಸ್ಪಿನ್ ಸ್ನೇಹಿ ಪಿಚ್ನಲ್ಲಿ ನಾಲ್ಕನೇ ಇನಿಂಗ್ಸ್ನಲ್ಲಿ 292 ರನ್ ಬಾರಿಸಿ ದಾಖಲೆ ಬರೆದಿರುವುದು ವಿಶೇಷ.