
ಟೀಂ ಇಂಡಿಯಾ ವಿರುದ್ಧದ 5 ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ಬ್ಯಾಟಿಂಗ್ ವಿಭಾಗ ಸಂಪೂರ್ಣವಾಗಿ ವಿಫಲವಾಗಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡದ ಪರ ನಾಯಕ ಜೋಸ್ ಬಟ್ಲರ್ ಹೊರತುಪಡಿಸಿ ಯಾವುದೇ ಬ್ಯಾಟ್ಸ್‌ಮನ್ ಕ್ರೀಸ್‌ನಲ್ಲಿ ಉಳಿಯಲು ಸಾಧ್ಯವಾಗಲಿಲ್ಲ. ಅರ್ಧಕ್ಕಿಂತ ಹೆಚ್ಚು ತಂಡಕ್ಕೆ ಎರಡಂಕಿ ಮುಟ್ಟಲು ಸಾಧ್ಯವಾಗಲಿಲ್ಲ.

ಇಂಗ್ಲೆಂಡ್‌ನ ಈ ಪ್ರದರ್ಶನ ಐಪಿಎಲ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಟೆನ್ಷನ್ ಹೆಚ್ಚಿಸಿದೆ. ವಾಸ್ತವವಾಗಿ, ಇಂಗ್ಲೆಂಡ್ ಆಡುವ 11 ರ ಬಳಗದಲ್ಲಿ ಸ್ಥಾನ ಪಡೆದಿರುವ ಮೂವರು ಬ್ಯಾಟ್ಸ್‌ಮನ್‌ಗಳು ಮುಂದಿನ ಐಪಿಎಲ್‌ನಲ್ಲಿ ಆರ್ಸಿಬಿ ಪರ ಕಣಕ್ಕಿಳಿಯಲಿದ್ದು, ಈ ಮೂವರ ಮೇಲೆ ಆರ್ಸಿಬಿ ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದೆ. ಆದರೆ ಈ ಮೂವರು ಕೂಡ ಬ್ಯಾಟಿಂಗ್ನಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ.

ವಾಸ್ತವವಾಗಿ ಈ ಬಾರಿಯ ಮೆಗಾ ಹರಾಜಿನಲ್ಲಿ ಆರ್ಸಿಬಿ, ಫಿಲ್ ಸಾಲ್ಟ್, ಲಿಯಾಮ್ ಲಿವಿಂಗ್‌ಸ್ಟನ್ ಮತ್ತು ಜಾಕೋಬ್ ಬೆಥೆಲ್ ಅವರನ್ನು ಕೋಟಿ ಕೋಟಿ ರೂ ನೀಡಿ ಖರೀದಿಸಿದೆ. ಇದರಲ್ಲಿ ಫಿಲ್ ಸಾಲ್ಟ್ಗೆ 11.50 ಕೋಟಿ ರೂ, ಲಿಯಾಮ್ ಲಿವಿಂಗ್ ಸ್ಟನ್ಗೆ 8.75 ಕೋಟಿ ರೂ, ಹಾಗೂ ಜೇಕಬ್ ಬೆತೆಲ್ ಗೆ 2.60 ಕೋಟಿ ರೂ. ನೀಡಿದೆ. ಅಂದರೆ ಈ ಮೂವರು ಆಟಗಾರರನ್ನು ಖರೀದಿಸಲು ಆರ್ಸಿಬಿ 22.85 ಕೋಟಿ ರೂ. ಖರ್ಚು ಮಾಡಿದೆ. ಆದರೆ ಈ ಮೂವರೂ ಆಟಗಾರರು ದಯನೀಯವಾಗಿ ವಿಫಲರಾಗಿದ್ದಾರೆ.

ಈ ಮೂವರ ಮೇಲೆ ಆರ್ಸಿಬಿ ಇಷ್ಟು ಮೊತ್ತ ಸುರಿಯಲು ಕಾರಣವೂ ಇದ್ದು ಕಳೆದ ಐಪಿಎಲ್ ಸೀಸನ್ನಲ್ಲಿ ಫಿಲ್ ಸಾಲ್ಟ್ ಸ್ಫೋಟಕ ಬ್ಯಾಟಿಂಗ್ ಮಾಡಿದ್ದರು. ಆರಂಭಿಕರಾಗಿ ಸಾಕಷ್ಟು ರನ್ ಗಳಿಸಿದ್ದರು. ಆದರೆ ಈ ಪಂದ್ಯದಲ್ಲಿ ಅವರು ಕೇವಲ 3 ಎಸೆತಗಳನ್ನು ಎದುರಿಸಿ ಖಾತೆ ತೆರೆಯದೆ ಔಟಾದರು. ಸಾಲ್ಟ್ರನ್ನು ಅರ್ಷದೀಪ್ ಸಿಂಗ್ ಮೊದಲ ಓವರ್ನಲ್ಲೇ ಪೆವಿಲಿಯನ್ಗಟ್ಟಿದರು.

ಇವರ ನಂತರ ಬಂದ ಲಿಯಾಮ್ ಲಿವಿಂಗ್ಸ್ಟನ್ ಕೂಡ ಸಾಲ್ಟ್ರಂತೆ ಯಾವುದೇ ಪ್ರಭಾವ ಬೀರದೆ ಪೆವಿಲಿಯನ್ ಸೇರಿಕೊಂಡರು. ಕೇವಲ 2 ಎಸೆತಗಳನ್ನು ಮಾತ್ರ ಎದುರಿಸಿದ ಲಿವಿಂಗ್ಸ್ಟನ್ ಖಾತೆ ತೆರೆಯದೆ ಪೆವಿಲಿಯನ್‌ಗೆ ಮರಳಿದರು. ವರುಣ್ ಚಕ್ರವರ್ತಿಯ ಗೂಗ್ಲಿ ಎಸೆತವನ್ನು ಎದುರಿಸುವಲ್ಲಿ ವಿಫಲರಾದ ಲಿವಿಂಗ್ಸ್ಟನ್ ಕ್ಲೀನ್ ಬೌಲ್ಡ್ ಆದರು.

ಇದಾದ ಬಳಿಕ ಬಂದ ಯುವ ಆಲ್ರೌಂಡರ್ ಜೇಕಬ್ ಬೆಥೆಲ್ ಕೂಡ ಪ್ರಭಾವಿ ಇನ್ನಿಂಗ್ಸ್ ಆಡುವಲ್ಲಿ ವಿಫಲರಾದರು. ಬೆಥೆಲ್ ಖಾತೆ ತೆರೆದರಾದರೂ ರನ್ ಗಳಿಸಲು ಪರದಾಡುತ್ತಿರುವುದು ಕಂಡು ಬಂತು. ತಮ್ಮ ಇನ್ನಿಂಗ್ಸ್‌ನಲ್ಲಿ 14 ಎಸೆತಗಳನ್ನು ಎದುರಿಸಿದ ಬೆಥೆಲ್ 50 ಸ್ಟ್ರೈಕ್ ರೇಟ್‌ನಲ್ಲಿ ಕೇವಲ 7 ರನ್ ಗಳಿಸಲಷ್ಟೇ ಶಕ್ತರಾದರು. ಹೀಗಿರುವಾಗ ಈ ಮೂವರು ಆಟಗಾರರ ಕಳಪೆ ಪ್ರದರ್ಶನ ಆರ್ಸಿಬಿ ತಂಡದ ಟೆನ್ಷನ್ ಹೆಚ್ಚಿಸಿದೆ.